ಜೈಪುರ: ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯಂತೆ, ರಾಜಸ್ಥಾನದಲ್ಲಿ ವಿಶ್ವದ ಅತ್ಯಂತ ಎತ್ತರದ ಶಿವನ ವಿಗ್ರಹ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ 597 ಅಡಿ ಎತ್ತರದಲ್ಲಿದೆ. ಕುಳಿತಿರುವ ಭಂಗಿಯಲ್ಲಿರುವ ಶಿವನ ವಿಗ್ರಹ 351 ಅಡಿ ಎತ್ತರ ಇರಲಿದ್ದು, ವಿಶ್ವದ ಅತ್ಯಂತ ಎತ್ತರದ ಶಿವನ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ವರ್ಷಾಂತ್ಯದೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಫೆಬ್ರವರಿ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ.
ಈಗಾಗಲೇ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ರಾಜಸ್ಥಾನದ ನಾಥದ್ವಾರದಲ್ಲಿ ಈ ಬೃಹತ್ ಶಿವನ ವಿಗ್ರಹ ತಲೆಯೆತ್ತುತ್ತಿದೆ. 2012ರಲ್ಲಿ ಇಲ್ಲಿ ಗುದ್ದಲಿಪೂಜೆ ನೆರವೇರಿಸಲಾಗಿದ್ದು, 6 ವರ್ಷಗಳ ಸತತ ಪ್ರಯತ್ನಗಳ ನಂತರ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ.
ವಿಶ್ವದ ಅತ್ಯಂತ ಎತ್ತರದ ಶಿವನ ಮೂರ್ತಿ ಎಂಬ ಖ್ಯಾತಿ ಪಡೆಯಲಿರುವ ಈ ವಿಗ್ರಹವನ್ನು 750 ಜನ ಸೇರಿ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ಮೂಲದ ಮಿರೇಜ್ ಗ್ರೂಪ್ ಎಂಬ ಕಂಪನಿ ಈ ಪ್ರತಿಮೆಯ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ. 351 ಅಡಿ ಎತ್ತರ ಇರುವ ಈ ಪ್ರತಿಮೆಯ ಶಿವನ ಮುಖವೇ 70 ಅಡಿ ಉದ್ದ ಇರಲಿದೆ. ಶಿವನ ಸೊಂಟ 175 ಅಡಿ ಎತ್ತರದಲ್ಲಿರಲಿದೆ. 3 ಸಾವಿರ ಟನ್ ಉಕ್ಕನ್ನು ಬಳಸಿ ಈ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಈ ಪ್ರತಿಮೆಯ ಒಟ್ಟು ತೂಕ 30 ಸಾವಿರ ಟನ್. ಅರಮನೆಗಳಿಗೆ ಹೆಸರುವಾಸಿಯಾಗಿರುವ ರಾಜಸ್ಥಾನದತ್ತ ಇನ್ನಷ್ಟು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಈ ಪ್ರಯತ್ನ ಕೈಗೆತ್ತಿಕೊಳ್ಳಲಾಗಿದೆ. ವಿಗ್ರಹದ ಸುತ್ತ 4 ಲಿಫ್ಟ್ಗಳನ್ನು ಅಳವಡಿಸಲಾಗಿದೆ. ಮೂರು ಎಸ್ಕಲೇಟರ್ಗಳನ್ನು ಅಳವಡಿಸಲಾಗುತ್ತಿದೆ. 280 ಫೀಟ್ ಎತ್ತರದವೆರೆಗೆ ಮಾತ್ರ ಲಿಫ್ಟ್, ಎಸ್ಕಲೇಟರ್ ಬಳಸಬಹುದು. 20 ಕಿ.ಮೀ. ದೂರದಲ್ಲಿ ನಿಂತರೂ ಈ ಪ್ರತಿಮೆಯನ್ನು ನೋಡಬಹುದು.