ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಹಿಂದೂ ಮುಖಂಡರ ಮತ್ತು ಬಿಜೆಪಿ ನಾಯಕರ ಮೇಲಿನ ಕೇಸು ವಜಾಗೊಳಿಸಿದ ಹೈಕೋರ್ಟು – ಕಹಳೆ ನ್ಯೂಸ್
ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳರ ಕೊಲೆ ಪ್ರಕರಣವನ್ನು ಖಂಡಿಸಿ ಕೆಲ ಹಿಂದೂ ಮುಖಂಡರು ಮತ್ತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯು 144 ಸೆಕ್ಷನ್ ಉಲ್ಲಂಘನೆ ಮಾಡಿದ ಆರೋಪ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೇಸನ್ನು ಹೈಕೋರ್ಟು ವಜಾಗೊಳಿಸಿದೆ.
ಆರ್‍ಎಸ್‍ಎಸ್‍ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶರತ್ ಮಡಿವಾಳ ಎಂಬ ವ್ಯಕ್ತಿಯನ್ನು ಹತ್ಯೆಗೈದಿರುವ ಕೈಗಳನ್ನು ಬಂಧಿಸಿ, ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ನಾಯಕರುಗಳು ಸೇರಿದಂತೆ ಹಲವಾರು ಹಿಂದು ಪ್ರಮುಖರುಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದಾಗ ಪೊಲೀಸ್ ಇಲಾಖೆಯು ಸೆಕ್ಷನ್ 144ನ್ನು ಜಾರಿಗೊಳಿಸಿ, ಪ್ರತಿಭಟನೆಯನ್ನು ತಡೆಯಲು ಯತ್ನಿಸಿತ್ತು. ಆದರೆ ಸೆಕ್ಷನ್ ವಿರೋಧಿಸಿ ಪ್ರತಿಭಟನೆ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದಡಿಯಲ್ಲಿ ಬಂಟ್ವಳ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಈ ಪೈಕಿ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು, ಕಾರ್ಕಳ ಶಾಸಕ ಸುನಿಲ್ ಕುಮಾರ್, ವಿಧಾನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಗಣೇಶ್ ಕಾರ್ಣಿಕ್, ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್‍ವೆಲ್, ಮುರಳೀಕೃಷ್ಣ ಹಸಂತಡ್ಕ ಸೇರಿದಂತೆ 5 ಮಂದಿ ಹೈಕೋರ್ಟು ಮೆಟ್ಟಿಲೇರಿದ್ದರು. ತಮ್ಮ ಮೇಲಿರುವ ಕೇಸನ್ನು ರದ್ದುಗೊಳಿಸುವಂತೆ ಕೋರಿದ್ದರು. ಇವರೆಲ್ಲರ ಪರ ವಕೀಲ ಅರುಣಶ್ಯಾಮ್ ಪುತ್ತೂರು ವಾದವನ್ನು ಮಾಡಿದ್ದರು. ಇವರ ವಾದವನ್ನು ಆಲಿಸಿದ ಹೈಕೋರ್ಟು ನ್ಯಾಯಮೂರ್ತಿ ಅಶೋಕ್ ಜಿ ನಿಜಗಣ್ಣನವರ್ ಅರ್ಜಿದಾರರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಏಫ್ ಐ ಆರ್ ರದ್ದುಗೊಳಿಸಲು ಆದೇಶಿಸಿದ್ದಾರೆ.