ಮಂಗಳೂರು: ಕುರುಚಲು ಗಡ್ಡವಿಟ್ಟು ಮಾನಸಿಕ ಅಸ್ವಸ್ಥತೆಯಿಂದ ಗುಂಡ್ಯ ಚೆಕ್ ಪೋಸ್ಟ್ ಬಳಿ ತಿಪ್ಪೆಗುಂಡಿಯಲ್ಲಿ ಕಸ ತಿಂದು ಕಾಲ ಕಳೆಯುತ್ತಿದ್ದ 35 ರ ಹರೆಯದ ಯುವಕ ಆರೋಗ್ಯ ಸುಧಾರಿಸಿ ಪಶ್ಚಿಮ ಬಂಗಾಳದ ಮುರ್ಶಿದಾಬಾದ್’ನಲ್ಲಿರುವ ತನ್ನ ಮನೆ ತಲುಪಿ ಕುಟುಂಬಿಕರ ಜೊತೆ ಈದ್ ಮಿಲಾದ್ ಸಂಭ್ರಮ ಹಂಚಿಕೊಂಡ ಅಪರೂಪದ ಘಟನೆ ನಡೆದಿದೆ.
ಅಸ್ಗರ್ (35) ಮಂಗಳೂರು-ಬೆಂಗಳೂರು ಹೆದ್ದಾರಿಯ ಗುಂಡ್ಯ ಚೆಕ್ ಪೋಸ್ಟ್ ಬಳಿ ಮಾನಸಿಕ ಅಸ್ವಸ್ಥತೆಯಿಂದ ಇರುವುದನ್ನು ಮನಗಂಡ ಸ್ಥಳೀಯ ಯುವಕರು ಬ್ರದರ್ ಜೋಸೆಫ್ ಸಾರಥ್ಯದ ತಲಪಾಡಿಯ “ಸ್ನೇಹಾಲಯ”ಕ್ಕೆ ಕಳೆದ ಮಾರ್ಚ್’ನಲ್ಲಿ ದಾಖಲಿಸಿದರು.
ಸ್ನೇಹಾಲಯದ ಶುಶ್ರೂಷೆಯನ್ನು ಪಡೆದ ಅಸ್ಗರ್ ಮಾನಸಿಕವಾಗಿ ಸದೃಢರಾದರು. ತಾನು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಿವಾಸಿಯೆಂದು ಅಸ್ಗರ್ ಗೆ ಮನವರಿಕೆಯಾಯಿತು. 12 ವರ್ಷಗಳ ಹಿಂದೆ ಕುಟುಂಬಿಕರಿಂದ ಬೇರ್ಪಟ್ಟಿದ್ದರು.
ಆರೋಗ್ಯ ಸುಧಾರಣೆಗೊಂಡ ಅಸ್ಗರ್’ನನ್ನು ಸ್ನೇಹಾಲಯ ಸಂಸ್ಥೆ ಮುಂಬೈಯ ಶೃದ್ಧಾ ಪುನರ್ವಸತಿ ಕೇಂದ್ರಕ್ಕೆ ಇತ್ತೀಚೆಗೆ ವರ್ಗಾಯಿಸಿತು. ಶೃದ್ಧಾ ಕೇಂದ್ರದವರು ಅಸ್ಗರ್’ನನ್ನು ಪಶ್ಚಿಮ ಬಂಗಾಳದ ಆತನ ಮನೆಗೆ ಕರೆದುಕೊಂಡು ಹೋಗಿ ನವಂಬರ್ 20 ರಂದು (ಮಂಗಳವಾರ) ಕುಟುಂಬಿಕರೊಂದಿಗೆ ಪುನರ್ಮಿಲನಗೊಳಿಸಿದೆಯಲ್ಲದೇ ಆತನ ಔಷಧಿ, ಊಟೋಪಚಾರಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡಿದೆ.
ಅಸ್ಗರ್ ಕಳೆದ 12 ವರ್ಷಗಳ ಹಿಂದೆ ಕುಟುಂಬಿಕರಿಂದ ಬೇರ್ಪಟ್ಟಿದ್ದರು. ಎಲ್ಲೆಲ್ಲೋ ತಿರುಗಾಡಿ ಕೊನೆಗೆ ತಲಪಾಡಿಯ ಸ್ನೇಹಾಲಯ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದರು. ಪ್ರವಾದಿ ಮಹಮ್ಮದ್ (ಸ.ಅ.) ಅವರು ಅಶಕ್ತರು, ರೋಗಿಗಳ ಕುರಿತು ವಿಶೇಷ ಕಾಳಜಿ ವಹಿಸಿರುವಂತಹ ಪುಣ್ಯ ಪುರುಷರು. ಅವರ ಜನ್ಮದಿನದಂದೇ ಅಸ್ಗರ್ ತನ್ನ ಕುಟುಂಬವನ್ನು ಸೇರಿದ್ದು ಅವರ ಕುಟುಂಬಕ್ಕೆ ಇಮ್ಮಡಿ ಸಂತೋಷ ನೀಡಿದೆ.