Friday, September 20, 2024
ಸುದ್ದಿ

ಭಾರತೀಯ ಶಿಷ್ಟ ಕಲೆಗಳು ವಿಶ್ವವಿದ್ಯಾನಿಲಯಗಳಂತೆ, ಎಲ್ಲಾ ಕಾಲದಲ್ಲೂ ಸಮಾಜ, ರಾಷ್ಟ್ರವನ್ನು ಕಟ್ಟಿ ಬೆಳೆಸಿದೆ: ಡಾ.ವಸಂತಕುಮಾರ್ – ಕಹಳೆ ನ್ಯೂಸ್

ಕುಂಬಳೆ : ಭಾರತೀಯ ಶಿಷ್ಟ ಕಲೆಗಳು ವಿಶ್ವವಿದ್ಯಾನಿಲಯಗಳಂತೆ ಎಲ್ಲಾ ಕಾಲದಲ್ಲೂ ಸಮಾಜ, ರಾಷ್ಟ್ರವನ್ನು ಕಟ್ಟಿ ಬೆಳೆಸಿದೆ. ಈ ಮೂಲಕ ಅವುಗಳು ಲೋಕಶಿಕ್ಷಣ ಮಾಧ್ಯಮದಂತೆ ಕಾರ್ಯನಿರ್ವಹಿಸಿದ್ದು, ಸವಾಲುಗಳನ್ನು ಎದುರಿಸುವ ಶಕ್ತಿ ಸಹಿತ ಬಹುಮುಖೀ ಮಹತ್ವ ಸಾಗರದಷ್ಟಿದೆ ಎಂದು ಮಂಗಳೂರು ಆಕಾಶವಾಣಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಸಂತಕುಮಾರ್ ಪೆರ್ಲ ಅಬಿಪ್ರಾಯ ವ್ಯಕ್ತಪಡಿಸಿದರು.

ಕುಂಬಳೆಯ ಕೀರ್ತನಾ ಕಟೀರದ ಆಶ್ರಯದಲ್ಲಿ ನಡೆದ ಹರಿಕೀರ್ತನಾ ಹಬ್ಬ=18 ಹರಿಕಥಾ ನವಾಹದ ಭಾನುವಾರ ಕಣಿಪುರ ಶ್ರೀಕ್ಷೇತ್ರದಲ್ಲಿ ನಡೆದ ಸಮಾರೋಪ, ಕೀರ್ತನಾ ಕಸ್ತೂರಿ ಪ್ರಶಸ್ತಿ ಪ್ರಧಾನ, ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಕೀರ್ತನ ಕುಟೀರದ ನೂತನ ಜಾಲತಾಣ (ವೆಬ್ಸೈಟ್)ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಕಾರ, ನೈತಿಕತೆ ವಿಸ್ತರಿಸುವಲ್ಲಿ ಹರಿಕಥಾ ಸತ್ಸಂಗದಂತಹ ಕಲಾಭಿವ್ಯಕ್ತಿಗಳು ಒಂದೊಂದು ಕಾಲಘಟ್ಟವನ್ನೂ ಜಾಗೃತಗೊಳಿಸಿ ಪೋಣಿಸಿದೆ. ಇಂದಿನ ಹೊಸ ತಲೆಮಾರಿಗೆ ಅನ್ವಯಗೊಳ್ಳುವಂತೆ ಯಮತ್ರ-ತಂತ್ರಗಳ ಸದ್ಬಳಕೆಯ ಮೂಲಕ ಇಂತಹ ಶ್ರೀಮಂತ ಕಲಾ ಪ್ರಪಂಚವನ್ನು ಪರಸ್ಪರ ಬೆಸೆಯುವಲ್ಲಿ ಜಾಲತಾಣಗಳ ಮೂಲಕ ಬೆಸೆಯುವುದು ಸ್ತುತ್ಯರ್ಹ ಎಮದು ಅವರು ತಿಳಿಸಿದರು.

ಜಾಹೀರಾತು

ತಂತ್ರಿವರೇಣ್ಯ ಉಳಿಯತ್ತಾಯ ವಿಷ್ಣು ಆಸ್ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಸಮಾಜ ಎಲ್ಲಾ ಸೌಕರ್ಯಗಳಿದ್ದರೂ ಸಮಕೀರ್ಣ ಸ್ಥಿತಿಯಲ್ಲಿ ಕಾಲೆಳೆಯುತ್ತಿರುವುದು ಭೀತಿಗೊಳಪಡಿಸುತ್ತಿದೆ. ಈ ನಿಟ್ಟಿನಲ್ಲಿ ಪರಂಪರೆಯ ಅರಿವು, ಸ್ವಾಭಿಮಾನ ಮತ್ತು ಧೈರ್ಯ ಮೂಡಿಸುವಲ್ಲಿ ಕಲಾಕ್ಷೇತ್ರಗಳು ಪರಿಣಾಮಕಾರಿಯಾಗಿ ಬಲ ನೀಡುವುದು. ಹರಿಕಥಾ ಸತ್ಸಂಗಗಳಂತಹ ಕಲಾಕ್ಷೇತ್ರದ ವಿಫುಲ ಬೆಳವಣಿಗೆಯಲ್ಲಿ ಸಕ್ರಿಯವಾಗಿರುವ ಕೀರ್ತನ ಕುಟೀರದ ಚಟುವಟಿಕೆಗಳು ಸ್ತುತ್ಯರ್ಹ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಪ್ರಸೂತಿ ತಜ್ಞೆ ಡಾ.ಶಾಂಭವಿ ಕುಂಬಳೆ ಅವರು ಮಾತನಾಡಿ, ಭಕ್ತಿಯ ಶಕ್ತಿಯನ್ನು ಮೂಡಿಸುವಲ್ಲಿ, ಪುರಾಣ ಇತಿಹಾಸಗಳನ್ನು ಮನತಟ್ಟುವಂತೆ ಜನಸಾಮಾನ್ಯರಿಗೆ ತಿಳಿಯಪಡಿಸುವಲ್ಲಿ ಹರಿಕಥಾ ಸಂಕೀರ್ತನೆಗಳು ಬಹಳಷ್ಟು ಕೊಡುಗೆ ನೀಡಿದೆ. ಇಂದು ಭಕ್ತಿಯ ಅಭಾವವೇ ಬದುಕಿನ ಏರಿಳಿತಗಳಿಗೆ ಸ್ಪಂಧಿಸಲಾಗದೆ ಸಂಕಷ್ಟಕ್ಕೊಳಗಾಗಲು ಕಾರಣವಾಗಿದ್ದು, ಸಂಕೀರ್ತನೆಗಳ ಮೂಲಕ ಮನಸ್ಸುಗಳು ಬಲಗೊಳ್ಳಲಿ ಎಂದು ಕರೆನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಮೃದಂಗ ವಿದ್ವಾನ್ ಬಾಬು ರೈ ಅವರಿಗೆ ಕೀರ್ತನ ಕಸ್ತೂರಿ ಪ್ರಶಸ್ತಿ ಪ್ರಧಾನಗೈಯ್ಯಲಾಯಿತು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಬಾಬು ರೈ ಅವರ ಬಗ್ಗೆ ಅಭಿನಂದನಾ ಭಾಷಣಗೈದರು. ಜೊತೆಗೆ ಖ್ಯಾತ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಅವರಿಗೆ ಯಕ್ಷಾಂಗಣ ರಂಗ ಸಾಮ್ರಾಟ, ನಾಟ್ಯ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಅವರಿಗೆ ನಾಟ್ಯಕಲಾ ಮಧುವಾಹಿನಿ ಹಾಗೂ ಚಿತ್ರಕಲಾವಿದ ಎಂ.ಜಿ.ಕೆ.ಆಚಾರ್ಯ ಕುಂಬಳೆ ಅವರಿಗೆ ಕಲಾ ಚಿತ್ರ ಚತುರ ಪ್ರಶಸ್ತಿಗಳನ್ನು ಪ್ರಧಾನಗೈಯ್ಯಲಾಯಿತು. ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣಗೈದರು. ಕೀರ್ತನ ಕುಟೀರದ ನೂತನ ಜಾಲತಾಣವನ್ನು ನಿಮರ್ಿಸುವಲ್ಲಿ ಸಹಕರಿಸಿದ ಅಭಿಯಂತರ ಸುಜಿತ್ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಹರಿಕಥಾ ಪರಿಷತ್ತು ಮಂಗಳೂರಿನ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ, ಕೀರ್ತನ ಕುಟೀರದ ಹರಿಕಥಾ ನವಾಹ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್, ಪ್ರ.ಕಾರ್ಯದಶರ್ಿ ರಾಮನಾಥ ನಾಯಕ್, ಕೋಶಾಧಿಕಾರಿ ಶಿವರಾಮ ಎನ್ ಮೊದಲಾದವರು ಉಪಸ್ಥಿತರಿದ್ದರು. ಕೀರ್ತನ ಕುಟೀರದ ಸಂಚಾಲಕ ಶಂ.ನಾ.ಅಡಿಗ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಶಂ.ನಾ ಅಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಹರಿಕಥಾ ನವಾಹದ ಸಮಾರೋಪದಂಗವಾಗಿ ಬೆಳಿಗ್ಗೆ 10 ರಿಂದ12.30ರ ವರೆಗೆ ಕುಮಾರಿಯರಾದ ಶಾಂಭವಿ, ವೈಭವಿ, ಶ್ರದ್ದಾ ನಾಯರ್ಪಳ್ಳ, ಧನ್ಯಶ್ರೀ, ದಿವ್ಯಶ್ರೀ ಅವರಿಂದ “ಹರಿಕಥಾ ಭಾವ-ವೈಭವ” ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲಾರತ್ನ ಶಂ.ನಾ.ಅಡಿಗರು ಸಮನ್ವಯಕಾರರಾಗಿ ಭಾಗವಹಿಸಿದರು. ಅಪರಾಹ್ನ 2 ರಿಂದ ಶ್ರದ್ದಾ ಗುರುದಾಸ್ ಮಂಗಳೂರು ಹಾಗೂ ಗಾಯತ್ರೀ ಅವರಿಂದ ಹರಿಕಥಾ ಸಂಕೀರ್ತನೆ ನಡೆಯಿತು. ಸಮಾರೋಪ ಸಭಾ ಕಾರ್ಯಕ್ರಮದ ಬಳಿಕ ಕಲಾರತ್ನ ಶಂ.ನಾ.ಅಡಿಗರಿಂದ ಹರಿಕಥಾ ಸಂಕೀರ್ತನೆ, ಬಳಿಕ ಮಂಗಲಾಚರಣೆಯೊಂದಿಗೆ ನವಾಹ ಸಂಪನ್ನಗೊಂಡಿತು.