Thursday, November 14, 2024
ಸುದ್ದಿ

ರಾಜ್ಯದ ಎಲ್ಲ ವಾಹನಗಳಿಗೂ ಹೊಸ ನಂಬರ್‍ ಪ್ಲೇಟ್‍ ಆದೇಶಕ್ಕೆ ಸಿದ್ಧತೆ : ಮಾಲಿಕರು ತೆರಬೇಕು 2 ಸಾವಿರ ರೂ.!

ಬೆಂಗಳೂರು : ರಾಜ್ಯದ ಎಲ್ಲ ವಾಹನಗಳಿಗೂ ಹೊಸ ನಂಬರ್‍ ಪ್ಲೇಟ್‍ ಅಳವಡಿಸುವಂತೆ ಆದೇಶ ಹೊರಡಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿಯೇ ಹೊಸ ಪ್ರಯೋಗ ಮಾಡಲು ರಾಜ್ಯದ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದಲ್ಲಿರೋ ಸುಮಾರು 66 ಲಕ್ಷ ವಾಹನಗಳಿಗೆ ಹೊಸ ನಂಬರ್ ಪ್ಲೇಟ್‍ ಅಳವಡಿಸಲು ಯೋಜನೆ ತಯಾರಿಸಿದ್ದು, ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಪ್ರಸ್ತುತ ಒಂದು ವಾಹನದ ನಂಬರ್ ಪ್ಲೇಟಿನ ಬೆಲೆ 1 ಸಾವಿರ ಇದೆ. ಆದರೆ ಹೊಸ ನಂಬರ್ ಪ್ಲೇಟ್‍ಗಳ ಅಳವಡಿಕೆ ಸರ್ಕಾರ ಮುಂದಾದರೆ ಮಾಲೀಕರ ಜೇಬಿಗೆ 2200 ರೂಪಾಯಿ ಕತ್ತರಿ ಬೀಳಲಿದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ಪ್ರಕಾರ ಹೊಸ ಪ್ಲೇಟ್‍ ಅಳವಡಿಸುವುದರಿಂದ ನಂಬರ್, ಗಾತ್ರದಲ್ಲಿ ದೊಡ್ಡದಾಗಿ ಕಾಣಲಿದೆ. ರೇಡಿಯಂ ಬಣ್ಣ ಅಳವಡಿಸುವುದರಿಂದ ಕತ್ತಲಲ್ಲಿಯೂ ಸುಲಭವಾಗಿ ನಂಬರ್ ಗುರುತಿಸಬಹುದು. ಸ್ವಂತ ವಾಹನಗಳಿಗೆ, ಬಾಡಿಗೆ ವಾಹನಗಳಿಗೆ ಹಾಗೂ ಬಸ್‍ಗಳಿಗೆ ಪ್ರತ್ಯೇಕ ಇಂಗ್ಲೀಷ್ ಅಕ್ಷರ ಅಳವಡಿಕೆಯಿಂದ ಸುಲಭವಾಗಿ ಗುರುತಿಸಬಹುದು.  45 ಡಿಗ್ರಿ ಕೋನದಲ್ಲಿಯೂ ಓದುವಂತೆ ಅಕ್ಷರ ವಿನ್ಯಾಸಗೊಳಿಸುವರಿಂದ ಅಪಘಾತ ಮತ್ತು ಅಪರಾಧ ಕೃತ್ಯಗಳ ಸಂದರ್ಭ ಹಿಟ್‍ ಅ್ಯಂಡ್ ರನ್‍ ಪ್ರಕರಣಗಳ ವಿಚಾರದಲ್ಲಿ ದೂರದಿಂದಲೂ ಸುಲಭವಾಗಿ ನಂಬರ್‍ ಪತ್ತೆ ಮಾಡಬಹುದು. ಕ್ರೋಮಿಯಂ ಹಾಲೋಗ್ರಾಮ್ ಲೇಸರ್ ನಂಬರ್ ಪ್ಲೇಟ್.
ಪತ್ರಕರ್ತೆ ಗೌರಿ ಹಂತಕರು ಬೈಕ್‍ನಲ್ಲಿ ಓಡಾಡಿರುವ ದೃಶ್ಯ ಸಿಕ್ಕಿದ್ದರೂ ನಂಬರ್‍ಗಳು ಸ್ಪಷ್ಟವಾಗಿ ಕಾಣದೇ ಹೋದದ್ದರಿಂದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇಂತಹ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲು ಸುಲಭವಾಗುತ್ತದೆ ಎಂಬುದು ಸರ್ಕಾರದ ವಾದ. ಆದರೆ ದುಬಾರಿ ವೆಚ್ಚವಾಗುವ ಕಾರಣ ಮಾಲೀಕರು ತಿರುಗಿ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎಚ್.ಎಂ.ರೇವಣ್ಣ ಅವರು ಕೆಲವೇ ದಿನಗಳಲ್ಲಿ ಹೊಸ ಯೋಜನೆಯ ನೀಲನಕ್ಷೆ ಸಿದ್ಧಪಡಿಸಲು ಸೂಚನೆ ನೀಡಿದ್ದು, ಇದೀಗ ಯೋಜನೆ ಕಾರ್ಯರೂಪಕ್ಕೆ ಬರುವ ಹಂತಕ್ಕೆ ತಲುಪಿದೆ. ಕರ್ನಾಟಕವು ರಾಜ್ಯದ ಎಲ್ಲ ವಾಹನಗಳಿಗೂ ನಂಬರ್ ಪ್ಲೇಟ್ ಅಳವಡಿಸುತ್ತಿರುವ ಮೊದಲ ರಾಜ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response