ಪುತ್ತೂರು: ಕೃಷಿಯನ್ನು ಮರೆತು ಕಂಪ್ಯೂಟರ್‌ನಲ್ಲಿ ಕಳೆದು ಹೋಗಿರುವ ಯುವಜನತೆಗೆ ಕೃಷಿಯ ಪ್ರಾಯೋಗಿಕ ಅನುಭವದ ಅವಶ್ಯಕತೆಯಿದೆ. ನಮ್ಮ ಹೊಟ್ಟೆ ತುಂಬಿಸುವ ಅಕ್ಕಿಯನ್ನು ಯಾವ ರೀತಿ ಬೆಳೆಸಲಾಗುತ್ತದೆ ಎಂದು ತಿಳಿಸುವ ಅವಶ್ಯಕತೆಯಿದೆ. ಕೃಷಿಯನ್ನು ಮರೆಯದೆ ಪ್ರವೃತಿಯಾಗಿಯಾದರೂ ಮುಂದುವರೆಸಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು.
ಅವರು ವಿವೇಕಾನಂದ ಮಹಾವಿದ್ಯಾಲಯದ ಗ್ರಾಮ ವಿಕಾಸ ಸಮಿತಿ, ಪುತ್ತೂರು ಸಿಟಿ ರೋಟರಿ ಕ್ಲಬ್, ಕಾಲೇಜಿನ ಐಕ್ಯೂಎಸಿ ಹಾಗೂ ಅನ್ಯಾನ್ಯ ಸಂಘಟನೆಗಳ ಆಶ್ರಯದಲ್ಲಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ಕಾಲೇಜು ದತ್ತು ಸ್ವೀಕರಿಸಿರುವ ಕುಡಿಪಾಡಿ ಗ್ರಾಮದಲ್ಲಿ ಆಯೋಜಿಸಿದ ಭತ್ತದ ಸುಗ್ಗಿ ಹಬ್ಬ ಹಾಗೂ ಜಲಕೊಯ್ಲು ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ನಗರದ ಸೋಗಿಗೆ ಜೋತು ಬಿದ್ದು ಹಳ್ಳಿಗಳನ್ನು ಮರೆಯುತ್ತಿದ್ದೇವೆ. ಕೃಷಿಯಿಂದ ದೂರವಾಗುತ್ತಿದ್ದೇವೆ. ಪದವಿ ಪಡೆದ ಮಾತ್ರಕ್ಕೆ ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸುವುದು ಅವಮಾನವೆಂದು ಭಾವಿಸುತ್ತಾರೆ. ವಿದ್ಯಾಭ್ಯಾಸದ ನಂತರ ನಮ್ಮ ಆಯ್ಕೆಯ ಕ್ಷೇತ್ರ ಯಾವುದೇ ಆಗಿದ್ದರೂ, ಕೃಷಿ ಅನ್ನುವುದು ಅದರ ಒಂದು ಭಾಗವಾಗಬೇಕು. ತಂತ್ರಜ್ಞಾನ ತುಂಬಾ ಮುಂದುವರೆದಿರುವ ಈ ಕಾಲದಲ್ಲಿ ನಮಗೆ ಬೇಕಾಗುವ ಕೃಷಿ ಮಾಡುವುದು ಎಂದಿಗೂ ಹೊರೆಯಾಗಲಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಡಿಪಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಸುಕುಮಾರ್ ಮಾತನಾಡಿ, ಕೃಷಿ ಜೀವನವನ್ನು ನಿಕೃಷ್ಟವಾಗಿ ಕಾಣುತ್ತಿರುವ ಸಂದರ್ಭಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಕೃಷಿಯನ್ನು ಮಾಡುತ್ತಿರುವುದು ಅಭಿನಂದನಾರ್ಹ. ಆಗಸ್ಟ್ ತಿಂಗಳಿನಲ್ಲಿ ಈ ಮಕ್ಕಳು ಮಾಡಿದ ನಾಟಿ ಇಂದು ಕೊಯ್ಲಿಗೆ ಬಂದಿದೆ. ಇದು ನಾವು ಶ್ರಮವಹಿಸಿ ಒಂದು ಕೆಲಸದಲ್ಲಿ ತೊಡಗಿಕೊಂಡರೆ ಸರಿಯಾದ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುವುದಕ್ಕೆ ಜೀವಂತ ನಿದರ್ಶನವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಭತ್ತದ ಕೃಷಿಗಾಗಿ ಗದ್ದೆಯನ್ನು ನೀಡಿ ಸಹಕರಿಸಿದ ನಾರಾಯಣ ಮಯ್ಯ ಹಾಗೂ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಪಾಠವನ್ನು ನೀಡಿದ ಹಾಗೂ ಭತ್ತದ ಪೈರನ್ನು ಬೆಳೆಸಿದ ಮಹೇಶ್ ಅವರನ್ನು ಅಭಿನಂದಿಸಲಾಯಿತು.
ವಿವೇಕಾನಂದ ಕಾಲೇಜು ಪುತ್ತೂರು ಸಿಟಿ ರೋಟರಿ ಕ್ಲಬ್ ಸಹಕಾರದೊಂದಿಗೆ ನಿರ್ಮಿಸಿದ ಜಲಕೊಯು ್ಲಯೋಜನೆಯನ್ನು ಹಾಲೆರೆಯುವ ಮೂಲಕ ಉದ್ಘಾಟಿಸಲಾಯಿತು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ನಾಟಿ ಮಾಡಿ ಬೆಳೆದ ಪೈರನ್ನು ಕೊಯ್ಲು ಮಾಡಲಾಯಿತು.
ಈ ಸಂದರ್ಭ ಕುಡಿಪಾಡಿ ಶ್ರೀಲಕ್ಷಿ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ಧನ ಎರ್ಕಾಡಿತ್ತಾಯ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ್ ಭಟ್, ಖಜಾಂಜಿ ಸೇಡಿಯಾಪು ಜನಾರ್ಧನ ಭಟ್, ಗ್ರಾಮವಿಕಾಸ ಸಮಿತಿಯ ಆಡಳಿತ ಮಂಡಳಿ ಸದಸ್ಯ ಅನಂತ ಕೃಷ್ಣ ನಾಯಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್‌ಕೆ. ಮುದೂರ್, ಪುತ್ತೂರು ಸಿಟಿ ರೋಟರಿ ಕ್ಲಬ್ ಸುಮುದಾಯ ಸೇವೆಯ ಅಧಿಕಾರಿ ರೋ| ಹರಿಣಿ ಸತೀಶ್, ಕಾಲೇಜಿನ ಗ್ರಾಮ ವಿಕಾಸ ಸಮಿತಿ ಸಂಯೋಜಕ ಶ್ರೀಶ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿ, ಗ್ರಾಮ ವಿಕಾಸ ಯೋಜನೆ ಕಾರ್ಯದರ್ಶಿ ಮನ್ಮಥ ಶೆಟ್ಟಿ ವಂದಿಸಿದರು. ಎನ್.ಸಿ.ಸಿ. ಘಟಕದ ಸಂಯೋಜಕ ಡಾ.ರೋಹಿಣಾಕ್ಷ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.