ನವದೆಹಲಿ: ಹೈದರಬಾದ್ ನಾಗರ್ಜುನ ಹಿಲ್ಸ್ನಲ್ಲಿರುವ ವೈಎಸ್ ಚೌದರಿ ಮಾಲೀಕತ್ವದ ಕಂಪನಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಬಳಿಕ ಕಂಪನಿಗೆ ಸೇರಿದ ಹಲವು ಕಡತಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ರಾಜ್ಯದಲ್ಲಿ ಯಾವುದೇ ರೀತಿಯ ದಾಳಿ ನಡೆಸುವ ಮುನ್ನ ತಮ್ಮ ಅನುಮತಿ ಪಡೆಯಬೇಕೆಂದು ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ಇತ್ತೇಚೆಗಷ್ಟೇ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ತೆಲುಗು ದೇಶಂ ಪಕ್ಷಕ್ಕೆ ಸೇರಿದ ನಾಯಕನೋರ್ವನ ಮನೆ ಮೇಲೆ ಜಾರೀ ನಿರ್ದೇಶನಾಲಯ ದಾಳಿ ನಡೆಸಿದೆ. ಮಾಜಿ ಕೇಂದ್ರ ಸಚಿವ ವೈಎಸ್ ಚೌದರಿ ಎಂಬುವರ ಮನೆ/ಕಚೇರಿಗಳಲ್ಲಿ ಇಡಿ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.
ಟಿಡಿಪಿ ನಾಯಕ ಹಾಗೂ ಕೇಂದ್ರ ಸಚಿವರ ಮಾಲೀಕತ್ವದ ಸೃಜನ ಗ್ರೂಪ್ಸ್ ಆಫ್ ಇಂಡಸ್ಟ್ರೀಸ್ನಿಂದ ಕೆಲವು ಶೆಲ್ ಕಂಪನಿಗಳಿಗೆ ಇಮೇಲ್ ರವಾನೆ ಮಾಡಲಾಗಿದೆ. ಈ ವೇಳೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನೇ ಕಂಪನಿ ನಿರ್ದೇಶಕರನ್ನಾಗಿಸಿ ಹೊಸ ಕಂಪನಿಗಳನ್ನು ಶುರು ಮಾಡಲು ಚೌದರಿ ಯೋಚಿಸಿದ್ದಾರೆ. ಅಲ್ಲದೇ ಇವರ ಒಡೆತನ ಕಂಪನಿ ಭಾರೀ ಪ್ರಮಾಣದ ಭ್ರಷ್ಟಚಾರದಲ್ಲಿ ಭಾಗಿಯಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಂಗಾ ಸ್ಟೀಲ್ ಎಂಟರ್ ಪ್ರೈಸೆಸ್, ಭಾಗ್ಯನಗರ ಇನ್ವೆಸ್ಟ್ಮೆಂಟ್ ಅಂಡ್ ಟ್ರೇಡಿಂಗ್ ಲಿಮಿಟೆಡ್, ತೇಜಶ್ವಿನಿ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಫ್ಯೂಚರ್ ಟೆಕ್ ಇಂಡಸ್ಟ್ರೀಸ್ ಕಂಪನಿಗಳಿಗೆ ಭಾರೀ ಪ್ರಮಾಣದ ಹಣವನ್ನು ವರ್ಗಾಯಿಸಲಾಗಿದೆ. ಸೃಜನ ಗ್ರೂಪ್ಸ್ ಆಫ್ ಇಂಡಸ್ಟ್ರೀಸ್ ಕಂಪನಿಯಿಂದ ಯಾವುದೇ ರೀತಿಯ ಶೇರುಗಳನ್ನು ಖರೀದಿ ಮಾಡದೇ ಚೌದರಿ ಕೇವಲ ರಶೀದಿ ಪಡೆದು ಹಣ ವರ್ಗಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಪ್ರಮಾಣದ ಹಣ ಎಲ್ಲಿಂದ ಬಂತು? ಎಂಬುದರ ಬಗ್ಗೆ ಸಿಬಿಐ ತನಿಖೆ ಕೂಡ ನಡೆಸಿತ್ತು ಎನ್ನುತ್ತಿವೆ ಮೂಲಗಳು.
ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೂ ಇಡಿ ಅಧಿಕಾರಿಗಳು ವೈಎಸ್ ಚೌದರಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹಲವು ಕಡತಗಳು ಸೇರಿದಂತೆ ಪ್ರಮುಖವಾಗಿ ಕಂಪ್ಯೂಟರ್ ಹಾರ್ಡ್ ಡಿಸ್ಕ್ಗಳನ್ನು ಇಡಿ ವಶಕ್ಕೆ ಪಡೆದಿತ್ತು. ಈ ಸಂದರ್ಭದಲ್ಲಿ ತನಿಖೆಯಲ್ಲಿ ಮೂರು ಬ್ಯಾಂಕುಗಳಿಂದ 304 ಕೋಟಿಯಷ್ಟು ಹಣ ಪಡೆದು ಅವ್ಯವಹಾರ ಮಾಡಲಾಗಿದೆ. ಇದನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪ ಕೇಳಿ ಬಂದಿದೆ.