ಪುತ್ತೂರು: ನಿರಂತರವಾಗಿ ಬೆಳೆಗೆ ಹಾಗೂ ಭೂಮಿಗೆ ವಿಷ ಸಿಂಪಡಣೆ ಅತ್ಯಂತ ಆತಂಕಕಾರಿಯಾದ ಸಂಗತಿಯಾಗಿದ್ದು ಇದೇ ರೀತಿ ಮುಂದುವರಿದಿದೆ ಭವಿಷ್ಯದ ಬಗ್ಗೆ ಬಗ್ಗೆ ಆತಂಕವಾಗುತ್ತದೆ ಎಂದು ಅಂಕಣಕಾರ ಅಡ್ಡೂರು ಕೃಷ್ಣ ರಾವ್ ಹೇಳಿದರು.
ಅವರು ಭಾನುವಾರ ಪುತ್ತೂರು ತಾಲೂಕಿನ ವೀರಮಂಗಲ ಗಡಿಪಿಲ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಮನೆಯ ಆವರಣದಲ್ಲಿ ಸಮೃದ್ಧಿ ಗಿಡ ಗೆಳೆತನ ಸಂಘ ಪುತ್ತೂರು ಇದರ ವತಿಯಿಂದ ಹಸಿರು ಯಾನದ ರಜತ ಮೆಲುಕು ಕಾರ್ಯಕ್ರಮದಲ್ಲಿ ವಿಷಯುಕ್ತ ಆಹಾರ ಪೂರೈಕೆ ಮತ್ತು ಕೃಷಿಕರ ಪಾತ್ರ ಎಂಬ ವಿಚಾರದಲ್ಲಿ ಮಾತನಾಡಿದರು. ಬೆಳೆಗೆ ಕೀಟನಾಶಕ ಹಾಗೂ ಭೂಮಿಗೆ ಕಳೆನಾಶಕ್ಕೆ ಕೀಟನಾಶಕ ಸಿಂಪಡಣೆ ಮಾಡುವುದು ಬಹುದೊಡ್ಡ ಅಪಚಾರ.
ವಿಷ ಸಿಂಪಡಣೆಯ ಪರಿಣಾಮ ಇಂದು ಭೂಮಿ ವಿಷಮಯವಾಗುತ್ತಿದೆ. ಇಂದು ತೋಟದ ಕಳೆನಾಶಕ್ಕೆ ವಿವಿಧ ಬಗೆಯ ವಿಷ ಸಿಂಪಡಣೆ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಇದಕ್ಕೆ ನಿಷೇಧ ಇದೆ. ಆದರೆ ಭಾರತದ ಮಣ್ಣಲ್ಲಿ ಇಂದು ಇದು ಕೋಟಿಕೋಟಿಯ ವ್ಯವಹಾರ ಎಂದರು.
ದೇಶದಲ್ಲಿ ಕೀಟನಾಶಗಳು ಸರಿಸುಮಾರು 50 ಸಾವಿರ ಕೋಟಿ ವ್ಯವಹಾರ ಮಾಡುವ ಉದ್ಯಮವಾಗಿ ಬೆಳೆದಿದೆ. ಇದೆಲ್ಲಾ ರೈತತನ್ನು, ದೇಶದ ರೈತರನ್ನು ನಿಧಾನವಾಗಿ ಕೊಲ್ಲುತ್ತಿದೆ. ಇದಕ್ಕಾಗಿ ಈಗಲೇ ಎಚ್ಚೆತ್ತುಕೊಂಡು ನೆಮ್ಮದಿಯ ಬದುಕಿಗಾಗಿ ಎಲ್ಲರೂ ಪಾರಂಪರಿಕ ಕೃಷಿಯ ಕಡೆಗೆ ಅನಿವಾರ್ಯವಾಗಿ ಮನಸ್ಸು ಮಾಡಬೇಕಿದೆ ಎಂದರು.
ಇದೇ ಸಂದರ್ಭ ಔಷಧೀಯ ಸಸ್ಯಪ್ರಪಂಚದ ಮತ್ತು ಬಳಕೆ ಬಗ್ಗೆ ಉರಗ ತಜ್ಞ ಡಾ.ರವೀಂದ್ರನಾಥ ಐತಾಳ್, ಕೃಷಿಕ ಜಯಚಂದ್ರ ರಾವ್ ಕೊರ್ಡೇಲು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಮೀನಾಕ್ಷಿ ಅಮ್ಮ ಹಾಗೂ ಗೋಪಾಲಕೃಷ್ಣ ಭಟ್ ಮತ್ತು ಗಾಯತ್ರಿದೇವಿ ದೀಪಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಅಡಿಕೆ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ, ಕೃಷಿಕರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಆದರೆ ಭಯಪಡುವ ಅಗತ್ಯವಿಲ್ಲ.ತಾಂತ್ರಿಕತೆ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ. ಭವಿಷ್ಯದ ಚಿಂತನೆಯನ್ನು ವರ್ತಮಾನದಲ್ಲಿ ಚಿಂತಿಸಿ ಜೀವನಕ್ರಮ ಯೋಚಿಸಿ ಮುನ್ನಡೆಯಬೇಕಿದೆ ಎಂದರು.
ಸಮೃದ್ಧಿಯ ಹಿರಿಯ ಸದಸ್ಯರಾದ ಸುಬ್ರಾಯ ಭಟ್ ಮಾಪಲತೋಟ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಅಭಿನಂದನಾ ಮಾತುಗಳನ್ನಾಡಿದರು.
ಉದ್ಘಾಟನಾ ಸಮಾರಂಭದ ಬಳಿಕ ಸಮೃದ್ಧಿಯ ಸದಸ್ಯರಾದ ಸತ್ಯನಾರಾಯಣ ಎಸ್. ಎಡಂಬಳೆ, ಜನಾರ್ದನಾ ಭಟ್ ಸೇಡಿಯಾಪು, ಶಿವಸುಬ್ರಹ್ಮಣ್ಯ ಪೆಲತ್ತಡ್ಕ, ಯಶೋಚಂದ್ರ ಪಿ.ಆರ್, ಎ.ಪಿ ಸದಾಶಿವ ಮರಿಕೆ, ಕಾಸ್ಮೀರ್ ಕುಟ್ಹಿನೊ, ಡಾ.ಕರುಣಾಕರ್ ಎನ್. ವಿ ಸಮೃದ್ಧಿಯ ಬಗ್ಗೆ ಮಾತನಾಡಿದರು.
ರಜತ ಸಮಾರೋಪ ಕಾರ್ಯಕ್ರಮದಲ್ಲಿ ಸಮೃದ್ಧಿ ಗಿಡಗೆಳೆತನ ಸಂಘದ ಅಧ್ಯಕ್ಷ ಆರ್.ಕೆ. ಭಾಸ್ಕರ ಬಾಳಿಲ ಮಾತನಾಡಿ ಸಮೃದ್ಧಿಯ ಗಿಡಗೆಳೆತನ ಹಾಗೂ ಹಸಿರು ಯಾನವು ಮುಂದುವರಿಯಲಿದೆ ಎಂದರು. ಬಳಿಕ ಫಾರ್ಮ್ ಸರ್ಜ್ ಆ್ಯಪ್‌ನ ಉತ್ಪನ್ನಗಳ ಮಾಹಿತಿಯನ್ನು ಯದುನಂದನ ವಿ ಅಲೆಂಗಾರ ನೀಡಿದರು.
ಮಾಲಿನಿ ಪ್ರಸಾದ್ ಬಾಳಿಲ ಪ್ರಾರ್ಥಿಸಿದರು. ಕಮ್ಮಜೆ ಶಂಕರನಾರಾಯಣ ಭಟ್ ಸ್ವಾಗತಿಸಿ ಸಮೃದ್ಧಿ ಕಾರ್ಯದರ್ಶಿ ರಾಮಪ್ರತೀಕ್ ಕರಿಯಾಲ ಪ್ರಸ್ತಾವನೆಗೈದರು. ಶಂಕರನಾರಾಯಣ ಭಟ್ ವಂದಿಸಿದರು. ಪತ್ರಕರ್ತ ನಾ.ಕಾರಂತ ಪೆರಾಜೆ ಹಾಗೂ ಡಾ.ಕರುಣಾಕರ್ ಎನ್. ವಿ ನಿರೂಪಿಸಿದರು.