ರಾಯ್ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 9 ನಕ್ಸಲರು ಹತರಾಗಿದ್ದಾರೆ.
ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮೃತಪಟ್ಟ ನಕ್ಸಲರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗರ್ಗ್ ಹೇಳಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಆರ್ಜಿಯ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.
ತೆಲಂಗಾಣ ಮತ್ತು ಛತ್ತೀಸ್ಗಢದ ಗಡಿ ಭಾಗದ ನೀಲಂಮಡಗು ಮತ್ತು ಕೋರಿಂಜೇಡ್ ಅರಣ್ಯ ಪ್ರದೇಶದ ಸಕ್ಲಾರ್ನಲ್ಲಿ ಭದ್ರತಾಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದೆ.
ನಕ್ಸಲರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಡಿಆರ್ಜಿ ಮತ್ತು ಎಸ್ಟಿಎಫ್ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆಗ ನಕ್ಸಲರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಭದ್ರತಾಪಡೆ ಪ್ರತಿದಾಳಿ ನಡೆಸಿದೆ.