ಬಂಟ್ವಾಳ: 2018-19 ಸಾಲಿನ ತಾಲೂಕು ಪಂಚಾಯತ್ ಒಂದು ಕೋಟಿ ಅನುದಾನ, ಅದಿಬಾರು ಶುಲ್ಕ 35 ಲಕ್ಷ ಅನುದಾನ ಕಾಮಗಾರಿಗಳನ್ನು ಪೆ.15 ರ ಒಳಗೆ ಮುಗಿಸಬೇಕು. ಗುಣಮಟ್ಟ ಕಾಯ್ದುಕೊಂಡು ಸಾರ್ವಜನಿಕರ ದೂರುಗಳಿಲ್ಲದೆ ಪೆಬ್ರವರಿ 15 ರ ಒಳಗಡೆ ಕಾಮಗಾರಿ ಸಂಪೂರ್ಣ ವಾಗಬೇಕು, ಇಲಾಖೆಗೆ ಮಂಜೂರಾದ ಯೋಜನೆಗಳು ಕ್ಲಪ್ತ ಸಮಯದಲ್ಲಿ ಮುಗಿಸಬೇಕು, ಅನುದಾನಗಳು ಸಂಪೂರ್ಣ ಬಳಕೆಯಾಗಬೇಕು ಎಂದು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಹೇಳಿದರು.
ಅವರು ತಾಲೂಕು ಪಂಚಾಯತ್ ನ ಎಸ್.ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ಜಿ.ಪಂ.ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿಶೇಷ ಸಭೆಯಲ್ಲಿ ಮಾತನಾಡಿದರು.
ಪ್ರಾಮುಖ್ಯತೆ ಇರುವಾಗ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿ ಎಂದರು. ದೂರುಗಳು ಬರದ ರೀತಿಯಲ್ಲಿ ಕಾಮಗಾರಿಯನ್ನು ನಡೆಸಿ ಎಂದರು. ಹಕ್ಕುಗಳ ಜೊತೆ ಜವಾಬ್ದಾರಿ ಯನ್ನು ಅರಿತುಕೊಂಡು ಕೆಲಸ ಮಾಡಿ ಎಂದರು.
ಇಂಜಿನಿಯರ್ ಮತ್ತು ಗುತ್ತಿಗೆದಾರರ ನಡುವಿನ ಕೆಲವೊಂದು ಸಮಸ್ಯೆಗಳನ್ನು ಆಲಿಸಿ ದ ಶಾಸಕರು ಎಲ್ಲಾ ಸಮಸ್ಯೆ ಗಳಿಗೆ ಪರಿಹಾರ ಇದೆ, ಎಲ್ಲವನ್ನು ಹಂತಹಂತವಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಪಿ.ಡಿ.ಒಗಳ ಸಮಸ್ಯೆ:
ಇಂಜಿನಿಯರ್ ಗಳ ಜೊತೆಯಲ್ಲಿ ಪಿ.ಡಿ.ಒ.ಗಳು ಸ್ಪಂದಿಸುವುದಿಲ್ಲ, ಹಾಗಾಗಿ ಕಾಮಗಾರಿಯನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿ ಜಿ.ಪಂ. ಇಂಜಿನಿಯರ್ ನರೇಂದ್ರ ಬಾಬು ತಿಳಿಸಿದರು.
ಮರಳು ಸಮಸ್ಯೆ:
ಗುತ್ತಿಗೆ ದಾರರಿಗೆ ಗಡಿ ಪ್ರದೇಶದಲ್ಲಿ ಸುಮಾರು ಎಂಟು ಗ್ರಾಮ ಪಂಚಾಯತ್ ಗಳ ಲ್ಲಿ ಕೆಲಸ ಮಾಡಲು ಮರಳು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಮತ್ತು ಕನಿಷ್ಟ ಅನುದಾನವನ್ನು ಇಲಾಖೆ ನೀಡದಿದ್ದರೆ ಕಾಮಗಾರಿ ನಡೆಸಲು ತೊಂದರೆ ಯಾಗುತ್ತಿದೆ ಎಂದರು.
ಈ ಬಗ್ಗೆ ಮಾತನಾಡಿದ ಶಾಸಕ ರಾಜೇಶ್ ನಾಯಕ್ ಈಗಾಗಲೇ ನಾನ್ ಸಿ.ಆರ್.ಜಡ್ ಏರಿಯಾದಲ್ಲಿ 76 ಜನರಿಗೆ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 3 ಸಾವಿರ ರೂ ನಲ್ಲಿ ನೀಡಬೇಕು ಎಂದು ಜಿಲ್ಲಾಧಿಕಾರಿಯವರ ಸಭೆಯಲ್ಲಿ ತಿಳಿಸಿದ್ದೇನೆ.
ಎಲ್ಲಾ ಕಡೆಗಳಲ್ಲಿ ಮರಳು ತೆಗೆಯಲು ಅವಕಾಶ ನೀಡಿದಾಗ ಇನ್ನಷ್ಟು ಮರಳು ದರ ಕಡಿಮೆ ಮಾಡಲು ಒತ್ತಾಯ ಮಾಡುತ್ತೇನೆ ಎಂದರು. ಜಿ.ಎಸ್.ಟಿ.ಯಲ್ಲಿರುವ ಗೊಂದಲ ನಿವಾರಣೆ ಮಾಡಲು ಸೂಕ್ತವಾದ ರೀತಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಸರಕಾರಿ ಕೆಲಸಗಳಿಗೆ ಮರಳು ಸಾಗಿಸುವ ವೇಳೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಪ್ರಯತ್ನ ಮಾಡುತ್ತೇನೆ, ಆದರೆ ನೀವು ಇಂತಹ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುವ ಯತ್ನ ಮಾಡಬೇಡಿ ಎಂದರು.
ತಾ.ಪಂ. ಇ.ಒ.ರಾಜಣ್ಣ ಮಾತನಾಡಿ ದ.ಕ.ಜಿಲ್ಲೆಯ ಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆ ದಾರರನ್ನು ಕರೆದು ಸಭೆ ನಡೆಸಿದ್ದು ಇಲ್ಲ, ಹಾಗಾಗಿ ಹೊಂದಾಣಿಕೆ ಯಿಂದ ಕೆಲಸ ಮಾಡಲು ಸಹಕಾರ ನೀಡಿ ಎಂದು ಅವರು ತಿಳಿಸಿದರು.
ತಾಲೂಕು ಪಂಚಾಯತ್ ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ ಬಂಗೇರ ಉಪಸ್ಥಿತರಿದ್ದರು.