Friday, September 20, 2024
ಸುದ್ದಿ

ಬರಹ ಹಾಗೂ ಮಾತು ಪತ್ರಕರ್ತನ ಆಯುಧ: ಗಣೇಶ್ ಎನ್. ಕಲ್ಲರ್ಪೆ – ಕಹಳೆ ನ್ಯೂಸ್

ಪುತ್ತೂರು: ಪತ್ರಿಕೋದ್ಯಮ ಎಂಬುವುದು ಒಂದು ವೃತ್ತವಿದ್ದಂತೆ. ನಾವು ಎಲ್ಲಿಂದ ಸುದ್ದಿಯನ್ನು ಪಡೆಯುತ್ತೇವೆಯೋ ಅಲ್ಲಿಗೇ ಸುದ್ದಿಯನ್ನು ನೀಡುತ್ತೇವೆ. ಬರಹ ಹಾಗೂ ಮಾತು ಪತ್ರಕರ್ತನ ಆಯುಧಗಳು. ಅವುಗಳಿಲ್ಲದೆಯೆ ಪತ್ರಿಕೋದ್ಯಮವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹಾಗೆಯೇ ನೈತಿಕತೆಯನ್ನು ಮರೆತಾತ ಪತ್ರಿಕೋದ್ಯಮಿಯಾಗಿದ್ದರೂ ಎಂದಿಗೂ ನಿಜಾರ್ಥದಲ್ಲಿ ಪತ್ರಕರ್ತನಾಗಲಾರ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ, ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಗಣೇಶ್ ಎನ್. ಕಲ್ಲರ್ಪೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿ ಬುಧವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಣದ ಬೆನ್ನೆತ್ತಿ ಹೋಗುವ ಮನುಷ್ಯ ನೈತಿಕತೆಯನ್ನು ಮರೆತಿರುತ್ತಾನೆ. ನಾವು ಸರಿಯಾದ ಮಾರ್ಗದಲ್ಲಿ ನಡೆದು, ಹಣ ನಮ್ಮ ಹಿಂದೆ ಬರುವಂತೆ ಮಾಡುವುದು ನಿಜವಾದ ಸಾಧನೆ ಎಂದೆನಿಸಿಕೊಳ್ಳುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೀಗೆ ಇರಬೇಕು ಹಾಗೂ ಇರಬಾರದು ಎನ್ನುವುದಕ್ಕೆ ಮಾದರಿ ವ್ಯಕ್ತಿಗಳಿರುತ್ತಾರೆ.

ಜಾಹೀರಾತು

ಪತ್ರಿಕೋದ್ಯಮ ಕ್ಷೇತ್ರವೂ ಇದಕ್ಕೆ ಹೊರತಲ್ಲ. ಪ್ರಚಾರ ಬಯಸಿ ಪತ್ರಕರ್ತರ ಬಳಿಗೆ ಬರುವವರು ಬಹಳ ಮಂದಿ. ಯಾವುದೇ ಸಂದರ್ಭದಲ್ಲಿಯೂ ಯಾವುದೇ ಆಮಿಷಕ್ಕೆ ಒಳಗಾಗದೆಯೆ ಶುದ್ಧ ಹಸ್ತರಾಗಿ ಉಳಿಯುವುದು ಪ್ರಾಮುಖ್ಯವೆನಿಸಿಕೊಳುತ್ತದೆ ಎಂದು ಅಭಿಪ್ರಾಯಪಟ್ಟರು.

ನೀರಿಗಿಳಿಯದೆ ಒಬ್ಬ ವ್ಯಕ್ತಿ ಈಜು ಕಲಿಯಲಾರ. ಅಂತೆಯೇ ಓದು ನಮಗೆ ಹೇಗೆ ಬರೆಯಬೇಕು ಎಂದು ಹೇಳಿಕೊಡುತ್ತದೆ. ಆದರೆ ನಾವು ಉತ್ತಮ ಬರಹಗಾರರಾಗಿ ರೂಪುಗೊಳ್ಳಬೇಕೆಂದರೆ ಬರೆದು ಕಲಿಯಬೇಕು.

ಓದು ನಮ್ಮ ಪದಗುಚ್ಛವನ್ನು ಶ್ರೀಮಂತಗೊಳಿಸುತ್ತದೆ. ಬರೆಯುವ ಅಭ್ಯಾಸದಿಂದ ನಮ್ಮ ಬರವಣಿಗೆ ಮಾಗುತ್ತದೆ. ನಾವು ಪಕ್ವಗೊಳ್ಳುತ್ತಾ ಹೋಗುತ್ತದೆ. ಪತ್ರಕರ್ತನಾದವನ ಗುರುತು ಅವನು ಬರವಣಿಗೆಯ ಶೈಲಿ ಎಂದು ನುಡಿದರು.

ಪ್ರಾಸ್ತವಿಕ ನುಡಿಗಳನ್ನಾಡಿ ಸ್ವಾಗತಗೈದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಮಾತನಾಡಿ ಪರಿಶ್ರಮದಿಂದ ಮೇಲೆ ಬಂದವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಬದುಕಿನಲ್ಲಿ ಅನುಭವ ಎನ್ನುವುದು ಅತಿದೊಡ್ಡ ಗುರು ಎಂದರು.

ಈ ಸಂದರ್ಭ ವಿಭಾಗದ ಉಪನ್ಯಾಸಕಿಯರಾದ ಪೂಜಾ ಪಕ್ಕಳ, ಸುಶ್ಮಿತಾ ಜಯಾನಂದ್, ಪ್ರಜ್ಞಾ ಬಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ, ಉಪನ್ಯಾಸಕಿ ರಾಧಿಕಾ ಕಾನತಡ್ಕ ವಂದಿಸಿದರು. ವಿದ್ಯಾರ್ಥಿನಿ ಸೀಮಾ ಪೋನಡ್ಕ ಕಾರ್ಯಕ್ರಮ ನಿರೂಪಿಸಿದರು.