Friday, September 20, 2024
ಸುದ್ದಿ

ಗಂಡನಲ್ಲಿ ಒಂದು ಕೋಟಿ ಬೇಡಿಕೆಯಿಟ್ಟು ಕೊಲೆ ಬೆದರಿಕೆ – ಕಹಳೆ ನ್ಯೂಸ್

ಮಂಗಳೂರು: ಪತಿಗೇ ಜೀವ ಬೆದರಿಕೆ ಕರೆ ಮಾಡಿ ಬರೋಬ್ಬರಿ 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಪ್ರಕರಣವೊಂದರಲ್ಲಿ ಮಣಿಪಾಲ ಅನಂತನಗರದ ನಿವಾಸಿ ಅಂಬಿಕಾ ನಾಯಕ್‌ ತಂದೆ ಕೆ. ವಾಸುದೇವ ಪ್ರಭುವನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಕರೆ ಮಾಡಿ ಬೆದರಿಕೆಯೊಡ್ಡಿದ ಪ್ರಮುಖ ಆರೋಪಿಗಳಾಗಿರುವ ಅಂಬಿಕಾ ನಾಯಕ್‌ ಹಾಗೂ ಆಕೆಯ ಸ್ನೇಹಿತ ಮಂಡ್ಯ ಜಿಲ್ಲೆಯ ಬಿ. ಮಂಜುನಾಥ್‌ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣದಲ್ಲಿ ಸ್ನೇಹಿತ ಮಂಜುನಾಥ್‌ ಮೂಲಕ ಕೊಲೆ ಬೆದರಿಕೆ ಹಾಕಿಸಿ ಸುಮಾರು ಒಂದು ಕೋಟಿ ರೂ. ಬೇಡಿಕೆಯಿಟ್ಟಿದ್ದ ಅಂಬಿಕಾ ತನ್ನ ಪತಿ, ತೊಕ್ಕೊಟ್ಟು ಕುಂಪಲ ನಿವಾಸಿ ಗಣೇಶ್‌ ನಾಯಕ್‌ ಅವರಿಂದ 50 ಲಕ್ಷ ರೂ. ವಸೂಲಿ ಮಾಡಿದ್ದಳು. ಅಷ್ಟಕ್ಕೂ ತೃಪ್ತಳಾಗದೆ ಪದೇಪದೇ ಸ್ನೇಹಿತ ಮಂಜುನಾಥ್‌ ಮೂಲಕ ಕರೆಮಾಡಿ ಇನ್ನೂ 50 ಲಕ್ಷ ರೂ. ನೀಡುವಂತೆ ಬೆದರಿಸುತ್ತಿದ್ದಳು. ಬೇಸತ್ತ ಗಣೇಶ್‌ ನಾಯಕ್‌ ಅವರು 2015ರಲ್ಲಿ ಉಳ್ಳಾಲ ಪೊಲೀಸ್‌ ಠಾಣೆಗೆ ಪತ್ನಿ ಅಂಬಿಕಾ ನಾಯಕ್‌ (42), ಮಾವ ಕೆ. ವಾಸುದೇವ ಪ್ರಭು (70) ಹಾಗೂ ಪತ್ನಿಯ ಸ್ನೇಹಿತ ಮಂಜುನಾಥ್‌ (32) ವಿರುದ್ಧ ಕ್ರಿಮಿನಲ್‌ ದೂರು ನೀಡಿದ್ದರು.

ಜಾಹೀರಾತು

2016ರ ಜನವರಿಯಲ್ಲಿ ಉಳ್ಳಾಲ ಪೊಲೀಸರು ಮಂಜುನಾಥ್‌ನನ್ನು ಠಾಣೆಗೆ ಕರೆಯಿಸಿ ಬಂಧಿಸಿ, ಬಳಿಕ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದರು. 2016ರ ಮಾರ್ಚ್‌ನಲ್ಲಿ ಪ್ರಕರಣದ ಮಾಸ್ಟರ್‌ ಮೈಂಡ್‌ ಅಂಬಿಕಾ ನಾಯಕ್‌ಳನ್ನೂ ಉಳ್ಳಾಲ ಠಾಣೆಗೆ ಕರೆಸಿ ಅನಂತರ ಅಲ್ಲಿಯೇ ಜಾಮೀನು ಕೊಟ್ಟು ಬಿಡುಗಡೆಗೊಳಿಸಿದ್ದರು. ಆದರೆ ಈ ಪ್ರಕರಣದ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರಿದಿತ್ತು.

2018ರ ಅ. 12ರಂದು ಉಳ್ಳಾಲ ಪೊಲೀಸರು ಈ ಕೊಲೆ ಬೆದರಿಕೆ ಹಾಗೂ ವಂಚನೆ ಪ್ರಕರಣದಲ್ಲಿ ಮಂಗಳೂರಿನ ಪ್ರಧಾನ ಸೀನಿಯರ್‌ ಸಿವಿಲ್‌ ಆಯಂಡ್‌ ಸಿಜೆಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯವು ಮೂವರು ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿ ನ. 19ರಂದು ಕೋರ್ಟ್‌ಗೆ ಹಾಜರಾಗುವಂತೆ ಆದೇಶಿಸಿತ್ತು. ಆರೋಪಿಗಳು ಹಾಜರಾಗದ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನಕ್ಕೆ ನ್ಯಾಯಾಲಯವು ವಾರಂಟ್‌ ಹೊರಡಿಸಿತ್ತು. ಅದರಂತೆ ನ. 27ರಂದು ಉಳ್ಳಾಲ ಪೊಲೀಸರು ವಾಸುದೇವ ಪ್ರಭುವನ್ನು ಮಣಿಪಾಲದ ಆತನ ನಿವಾಸದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಕರಣದಲ್ಲಿ ಅಂಬಿಕಾ ನಾಯಕ್‌, ಮಂಜುನಾಥ, ವಾಸುದೇವ ಪ್ರಭು ಸೇರಿಕೊಂಡು ಸಮಾನ ಉದ್ದೇಶದಿಂದ ಒಳಸಂಚು ನಡೆಸಿ ಗಣೇಶ್‌ ನಾಯಕ್‌ಗೆ ಫೋನ್‌ ಕರೆ ಹಾಗೂ ಪತ್ರದ ಮೂಲಕ ಕೊಲೆ ಮಾಡುವುದಾಗಿ ಹೆದರಿಸಿ ಗಣೇಶ್‌ ನಾಯಕ್‌ ಅವರಿಂದ 50 ಲಕ್ಷ ರೂ. ನಗದು ಹಣವನ್ನು ಲಪಟಾಯಿಸಿ, ನಂಬಿಕೆ ದ್ರೋಹ, ಮೋಸ ಮಾಡಿದ್ದು ಹಾಗೂ ಸಾಕ್ಷ್ಯನಾಶ ಮಾಡಿರುವ ಆರೋಪದ ಮೇಲೆ ಐಪಿಸಿ ಕಲಂ 406, 420, 387, 389, 201, 120(ಬಿ) ಹಾಗೂ 34 ಸೆಕ್ಷನ್‌ನಡಿ ಶಿಕ್ಷಾರ್ಹ ಅಪರಾಧ ಎಸಗಿರುವುದಾಗಿ ಎಂಬುದಾಗಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಗಣೇಶ್‌ ನಾಯಕ್‌ ವಿದೇಶದಲ್ಲಿ ನೆಲೆಸಿದ್ದರೆ, ಪತ್ನಿ ಅಂಬಿಕಾ ನಾಯಕ್‌ ಕುಂಪಲದ ನಿವಾಸದಲ್ಲಿ ವಾಸವಾಗಿದ್ದಳು. ಅಂಬಿಕಾಗೆ ಪತಿಯ ಆಸ್ತಿ ಹಾಗೂ ಹಣವನ್ನೆಲ್ಲ ತನ್ನದಾಗಿಸಿಕೊಳ್ಳುವ ದುರಾಸೆ ಮೂಡಿದ್ದು, ಸಂಚು ರೂಪಿಸಿದ್ದಳು. ಅದಕ್ಕಾಗಿ ಮಂಡ್ಯದ ಬಿ. ಮಂಜುನಾಥ ಯಾನೆ ಮಂಜುವನ್ನು ಬಳಸಿಕೊಂಡಿದ್ದಳು. ಆತನ ಜತೆಗೆ ಅನ್ಯೋನ್ಯವಾಗಿದ್ದಳು.ಅವನ ಜತೆಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಗಂಡನಿಗೆ ಜೀವ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆ ಇಡಲು ಶುರು ಮಾಡಿದ್ದಳು.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಗಣೇಶ್‌ ನಾಯಕ್‌ಗೆ ಪತ್ನಿಯ ಒಳಸಂಚು ಹಾಗೂ ಸ್ನೇಹಿತನ ಮೂಲಕ ಮಾಡುತ್ತಿದ್ದ ಬ್ಲ್ಯಾಕ್‌ ಮೇಲ್‌ ಗೊತ್ತಾಗುತ್ತಿರಲಿಲ್ಲ. ಮಗಳ ಕ್ರಿಮಿನಲ್‌ ಕೃತ್ಯಕ್ಕೆ ಖುದ್ದು ತಂದೆಯಾದ ಮಣಿಪಾಲ ಅನಂತನಗರದ ವಾಸುದೇವ ಪ್ರಭು ಸಾಥ್‌ ಕೊಟ್ಟಿದ್ದ. ಈ ಮೂವರು ವಂಚಕರು ಸೇರಿಕೊಂಡು ಪತ್ರಗಳನ್ನು ತಯಾರಿಸಿ, ಅದನ್ನು ಗಣೇಶ್‌ ನಾಯಕ್‌ಗೆ ಕಳುಹಿಸುತ್ತಿದ್ದರು. ಪತ್ರದಲ್ಲಿ 1 ಕೋಟಿ ರೂ. ಕೊಡಬೇಕೆಂದು, ಇಲ್ಲದಿದ್ದರೆ ಅವರನ್ನು ಹಾಗೂ ಅವರ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬರೆದಿದ್ದರು. ಅನಂತರ ಆ ಪತ್ರಗಳನ್ನು ಪ್ರಥಮ ಆರೋಪಿ ಅಂಬಿಕಾ ನಾಯಕ್‌ ಪತಿಗೆ ಅನುಮಾನ ಬರದ ರೀತಿಯಲ್ಲಿ ವಾಪಸ್‌ ಪಡೆದುಕೊಂಡು ಸಾಕ್ಷ್ಯನಾಶ ಮಾಡುತ್ತಿದ್ದಳು.

ಎರಡನೇ ಆರೋಪಿ ಮಂಡ್ಯದ ಬಿ. ಮಂಜುನಾಥ ಬೇರೆ ಬೇರೆ ಸ್ಥಳದಿಂದ ಬೇರೆ ಬೇರೆ ದೂರವಾಣಿ ಸಂಖ್ಯೆಗಳಿಂದ ಗಣೇಶ್‌ ನಾಯಕ್‌ರಿಗೆ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಭೀತಿಗೆ ಒಳಗಾಗಿದ್ದ ಗಣೇಶ್‌ ನಾಯಕ್‌ ಅವರು 50 ಲಕ್ಷ ರೂ.ಗಳನ್ನು ಮಂಜುನಾಥನ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದರು. ಬಳಿಕ 50 ಲಕ್ಷವನ್ನು ಅಂಬಿಕಾ ನಾಯಕ್‌ ಹಾಗೂ ಮಂಜುನಾಥ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಆ ಮೊತ್ತದ ಒಂದು ಭಾಗವನ್ನು 3ನೇ ಆರೋಪಿ ವಾಸುದೇವ ಪ್ರಭುಗೆ ವ್ಯಾಪಾರ ನಡೆಸಲು ನೀಡಲಾಗಿತ್ತು.

50 ಲಕ್ಷ ರೂ.ಗಳನ್ನು ಲಪಟಾಯಿಸಿದ್ದ ಈ ಮೂವರು ವಂಚಕರ ಗ್ಯಾಂಗ್‌ ಇನ್ನುಳಿದ 50 ಲಕ್ಷ ರೂ. ಹಣಕ್ಕಾಗಿ ಮತ್ತೆ ಗಣೇಶ್‌ ನಾಯಕ್‌ಗೆ ಅನಾಮಿಕ ಕರೆ ಮಾಡುತ್ತಿದ್ದರು. ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಪತ್ನಿ ಮತ್ತು ಆಕೆಯ ಸ್ನೇಹಿತ ಮಂಜುನಾಥ್‌ನ ಕಿರುಕುಳ ತಾಳಲಾರದೆ ಕೊನೆಗೆ ಗಣೇಶ್‌ ನಾಯಕ್‌ ಅವರು ಉಳ್ಳಾಲ ಪೊಲೀಸರ ಮೊರೆ ಹೋಗಿದ್ದರು. ಮೂರನೇ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಉಳಿದವರಿಗಾಗಿ ಪೊಲೀಸರು ಬಲೆಬೀಸಿದ್ದಾರೆ.