ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದರು.
ಹುಬ್ಬಳ್ಳಿಯಲ್ಲಿ ತಮ್ಮನ್ನ ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಎಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಸರಕಾರಕ್ಕೆ ಆಪತ್ತು ಬರಬಹುದು ಎಂಬ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುತಿಲ್ಲ ರಾಜ್ಯದ ಹಿತರಕ್ಷಣೆ ಕಾಂಗ್ರೆಸ್ ನಾಯಕರಿಗೆ ಬೇಕಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲವೆಂದು ಇದೇ ವೇಳೆ ಹೇಳಿದ ಅವರು, ಅವರೇ ಕಚ್ಚಾಡಿ ಸರ್ಕಾರ ಬೀಳಿಸಲಿದ್ದು, ಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಕಾಂಗ್ರೆಸ್ -ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದ್ದಿದ್ದರೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ಕಿಡಿ ಕಾರಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‍ನವರು ಸಿದ್ದರಾಮಯ್ಯನನ್ನು ಹೀನಾಯವಾಗಿ ಸೋಲಿಸಿದ್ದಾರೆ. ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಇದು ಸರ್ಕಾರನೇನ್ರೀ.. ಯಾವ ಭಾಷೆಯಲ್ಲಿ ಹೇಳಬೇಕು.ಇದು ದೇವೇಗೌಡ- ರೇವಣ್ಣ ಸರ್ಕಾರ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಅಧಿಕಾರಕ್ಕೆ ಆಸೆಪಟ್ಟು ಎಲ್ಲ ಸಿದ್ದಾಂತ ಮರೆತು ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್‍ಗೆ ಇಂತಹ ದುಸ್ಥಿತಿ ಬರಬಾರದಿತ್ತು ಎಂದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗಳಿಸಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.