Friday, September 20, 2024
ಸುದ್ದಿ

Breaking News : ಮೇಳ ಏಲಂಗೆ ಬ್ರೇಕ್ ! ಯಜಮಾನರ ನೇತೃತ್ವದಲ್ಲೇ ಈ ಬಾರಿ ಕಟೀಲು ಮೇಳ ತಿರುಗಾಟ ; ಪಟ್ಲ ಸತೀಶ್ ಶೆಟ್ಟಿ 3ನೇ ಮೇಳಕ್ಕೆ ? – ಕಹಳೆ ನ್ಯೂಸ್

ಕಟೀಲು :  ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಮೇಳದ ಈ ವರ್ಷದ ತಿರುಗಾಟ ಡಿ.2ರಂದು ಆರಂಭಗೊಳ್ಳಲಿದ್ದು, ಹಿಂದಿನಂತೆ ಮೇಳದ ಯಜಮಾನರ ನೇತೃತ್ವದಲ್ಲೇ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಆರು ಮೇಳಗಳಲ್ಲಿ ಕಲಾವಿದರ ಬದಲಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇಳಗಳನ್ನು ನಡೆಸಲು ಆನುವಂಶಿಕ ಮೊಕ್ತೇಸರರಿಗೆ ಷರತ್ತುಗಳನ್ನು ಒಳಪಟ್ಟು ಅನುಮತಿ ನೀಡಲಾಗಿದ್ದು, ಯಾವುದೇ ವ್ಯತ್ಯಯಗಳು ಉಂಟಾದಲ್ಲಿ ಅವರೇ ನೇರ ಜವಾಬ್ದಾರರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ದೇವಾಲಯದ ಹೆಸರಿನಲ್ಲಿ ನಡೆಯುತ್ತಿರುವ ಆರು ಮೇಳಗಳನ್ನು ದೇವಸ್ಥಾನದಿಂದಲೇ ನಡೆಸುವುದು ಅಥವಾ ಏಲಂ ನಡೆಸುವ ಕುರಿತು ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಸೂಚನೆ ನೀಡಿತ್ತು. ಆದರೆ ವರದಿ ಸಿದ್ಧಪಡಿಸಲು ಕಾಲಾವಕಾಶ ಬೇಕಾಗಿರುವುದರಿಂದ ಪೂರ್ವನಿಗದಿಯಂತೆ ಡಿ.2ರಂದು ತಿರುಗಾಟ ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳಬೇಕು, ಮೇಳಗಳ ತಿರುಗಾಟ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಏರ್ಪಾಡು ಮಾಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ನಿರ್ದೇಶಿಸಿದ್ದರು. ಇದರ ಅನ್ವಯ ಜಿಲ್ಲಾಡಳಿತ ತಾತ್ಕಾಲಿಕ ಕ್ರಮ ಕೈಗೊಂಡಿದೆ.

ಜಾಹೀರಾತು


ಇದೊಂದು ಧಾರ್ಮಿಕ ಆಚರಣೆ ಆಗಿರುವುದರಿಂದ, ಪ್ರತಿವರ್ಷ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಬೇಕಾಗಿದೆ. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಹಿಂದಿನಂತೆ ಮುಂದುವರಿಸಬೇಕು. ವಿಚಾರಣೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಈ ಹಿಂದಿನ ವರ್ಷಗಳಂತೆ ಮೇಳಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಎಲ್ಲ ಪ್ರದರ್ಶನಗಳ ಸ್ಥಳ ಮತ್ತು ದಿನಾಂಕ ಮಾಹಿತಿ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು.

ಪ್ರತಿಯೊಂದು ಪ್ರದರ್ಶನದ ವೀಳ್ಯ ಹೊರತುಪಡಿಸಿ ಹೆಚ್ಚುವರಿ ಶುಲ್ಕ ಅಥವಾ ಸೇವಾ ಶುಲ್ಕ ವಿಧಿಸಬಾರದು. ಪ್ರದರ್ಶನಕ್ಕೆ ಸೇವಾ ಶುಲ್ಕವನ್ನು ನಿಯಮಾನುಸಾರ ವಿಧಿಸಿ ರಶೀದಿ ನೀಡಬೇಕು. ಯಾವುದೇ ದುರುಪಯೋಗ ತಡೆಯಬೇಕು. ಪ್ರದರ್ಶನದಿಂದ ಬರುವ ಪ್ರತಿಯೊಂದು ಲೆಕ್ಕವನ್ನು ಕ್ರಮವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಪಟ್ಲ 3ನೇ ಮೇಳಕ್ಕೆ ?:

ಈ ಬಾರಿಯೂ ಕಲಾವಿದರ ವರ್ಗಾವಣೆ ನಡೆದಿದ್ದು, ಗೊಂದಲವೇರ್ಪಡದಂತೆ ಮಾಹಿತಿ ಗೌಪ್ಯವಿಡಲಾಗಿದೆ. ಬಡಗು ಸ್ತ್ರೀವೇಷಧಾರಿಗಳನ್ನು ಮೇಳಕ್ಕೆ ಕರೆಸಿಕೊಳ್ಳಲಾಗಿದ್ದು, ಸ್ಟಾರ್ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು 4ನೇ ಮೇಳದಿಂದ 3ನೇ ಮೇಳಕ್ಕೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಬಾರಿ 6 ಮೇಳಗಳ ಕಲಾವಿದರನ್ನು ಮತ್ತು ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ವರ್ಗಾವಣೆ ಮಾಡಿದ್ದಕ್ಕೆ 10 ಕಲಾವಿದರು ಮೇಳದ ಯಜಮಾನರ ವಿರುದ್ಧ ಸಿಡಿದೆದ್ದಿದ್ದರು. ಇದೇ ಸಿಟ್ಟು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡುವಲ್ಲಿವರೆಗೆ ತಲುಪಿದೆ.

ಮೂಲ ವರದಿ : ವಿಜಯವಾಣಿ