ಬಂಟ್ವಾಳ: ತಾಲೂಕಿನ ಮಾಣಿ ಗ್ರಾಮದಲ್ಲಿ ಡಿ. ೮ ರಂದು ಮಾಣಿಗುತ್ತುವಿನಲ್ಲಿ ನಡೆಯಲಿರುವ ಕಂಬಳದ ಕೋರಿ ನೇಮಕ್ಕೆ ನಿನ್ನೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ಗೊನೆ ಕಡಿಯಲಾಯಿತು.
ಕಂಬಳಕೋರಿ ಎಂದರೆ ಗ್ರಾಮದ ಪಾವಿತ್ರ‍್ಯತೆ ಹೊಂದಿರುವ ಕಂಬಳ ಗದ್ದೆಯ ಕೋರುವುದು / ಉಳುಮೆ ಮಾಡುವುದು ಆಗಿದೆ. ಮಾಣಿ ಕಂಬಳ ಗದ್ದೆಗೆ ಸೂತಕ, ಮೈಲಿಗೆ ಇದ್ದವರು ಹೋಗುವಂತಿಲ್ಲ. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ- ಕಟ್ಟು ನಿಟ್ಟಿನ ನಿಯಮವಾಗಿದೆ.
ಕಂಬಳಕೋರಿಗೆ ನಿಗದಿಗೊಳಿಸಿದ ಏಳು ದಿವಸಗಳ ಮೊದಲು ಮಾಣಿ ಗುತ್ತಿನ ಮನೆಯಲ್ಲಿ ಗೊನೆ ಮುಹೂರ್ತ ನಡೆಯುತ್ತದೆ. ದೈವದ ಅಪ್ಪಣೆ ಪ್ರಕಾರ ಈ ನೇಮಕ್ಕೆ ಗ್ರಾಮಸ್ಥರ ಮನೆ ಮನೆಗೆ ಹೋಗಿ ಆಮಂತ್ರಣ ಕೊರಗಜ್ಜ ದೈವ ನೀಡುತ್ತದೆ. ಈ ದೈವಕ್ಕೆ ಗ್ರಾಮದ ಪ್ರತೀ ಮನೆಯ ಜನರು ಬರಮಾಡಿ ತುಳುನಾಡಿನ ಸಾರ್ವತ್ರಿಕ ಅಕ್ಕಿ ಅಥವಾ ಭತ್ತ, ತೆಂಗಿನ ಕಾಯಿ, ಯಥಾನುಶಕ್ತಿ ಕಾಣಿಕೆ ಮಾನಾದಿಗೆ ನೀಡಿ ಆಶೀರ್ವಾದ ಪಡೆಯುತ್ತಾರೆ. ಕೆಲವು ಮಂದಿ ಅಗೇಲು ಬಡಿಸುವ ಮೂಲಕ ಕೊರಗಜ್ಜನ ಸಂತೃಪ್ತಿ ಪಡಿಸಿ ಧನ್ಯತಾ ಭಾವ ಹೊಂದುತ್ತಾರೆ.