ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ವೈಯಕ್ತಿಕ ಕಾರಣಗಳಿಂದ ವಿಭಾಗವನ್ನು ತೊರೆಯುತ್ತಿರುವ ಉಪನ್ಯಾಸಕಿ ಪೂಜಾ ಪಕ್ಕಳ ಅವರನ್ನು ಮಂಗಳವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂದಭ್ದಲ್ಲಿ ಮಾತನಾಡಿದ ಪೂಜಾ ಪಕ್ಕಳ ಯಾವುದೇ ಒಂದು ಕೆಲಸವನ್ನು ಮಾಡುವ ಮೊದಲು ನೂರು ಬಾರಿ ಯೋಚಿಸಬೇಕು. ಆದರೆ ನಾವು ದುಡುಕಿ ಕೆಲವೊಮ್ಮೆ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತೇವೆ. ಅದು ನಮ್ಮನ್ನು ಇಬ್ಬಂದಿ ಪರಿಸ್ಥಿತಿಗೆ ತಂದು ನಿಲ್ಲಿಸಿದಾಗ ಮುಂದಿನ ದಾರಿ ತೋಚದೆ ಕಂಗಾಲಾಗಿ ಬಿಡುತ್ತೇವೆ. ಅದೆಷ್ಟೇ ಕ್ಲಿಷ್ಟ ಪರಿಸ್ಥಿತಿ ಬಂದೊದಗಿದರೂ ಪರಿಹಾರವಿದೆ ಎಂಬುದನ್ನು ಮರೆಯಬಾರದು. ನಮ್ಮ ಒಂದು ನಿಮಿಷದ ಯೋಚನೆ ನಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯ. ವಿವೇಕಾನಂದ ಕಾಲೇಜು ಸವಿ ನೆನಪುಗಳನ್ನು ಕಟ್ಟಿಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ಸಂವಹನ ಕೌಶಲ್ಯ ಎಂಬುವುದು ಎಲ್ಲರಿಗೂ ಸಿದ್ಧಿಸಿದ ವಿದ್ಯೆಯಲ್ಲ. ಮಾತಿನಿಂದ ಮೋಡಿಮಾಡಬಲ್ಲ ಚಾಕಚಕ್ಯತೆ ಉಪನ್ಯಾಸಕರಾದವರಿಗೆ ಅತೀ ಅಗತ್ಯ. ಅದು ಪತ್ರಿಕೋದ್ಯಮ ಸಂಬಂಧೀ ವೃತ್ತಿಗಳನ್ನು ಮಾಡವುವವರಿಗೆ ಇರಲೇ ಬೇಕಾದ ಮೂಲ ಅರ್ಹತೆಯೂ ಹೌದು. ನಮ್ಮ ಮುಂದಿರುವಾತನನ್ನು ಮಾತುಗಳಿಂದ ಒಂದು ಕೆಲಸಕ್ಕೆ ಒಪ್ಪಿಸುವ ವಿದ್ಯೆ ತಿಳಿದಾತ ಎಲ್ಲಿಯೂ ಬದುಕನ್ನು ಕಟ್ಟಿಕೊಳ್ಳಬಲ್ಲ. ಅಂತಹ ಗುಣ ಪೂಜಾ ಅವರಲ್ಲಿದೆ ಎಂದು ನುಡಿದರು.
ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಮಾತನಾಡಿ, ಯಾವುದೇ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕೆಂದರೆ ಸಂಸ್ಥೆಯ ಉದ್ಯೋಗಿಗಳ ನಿರಂತರ ಪರಿಶ್ರಮ ಬಹಳ ಮುಖ್ಯ. ಆತ್ಮೀಯತೆ ಇದ್ದಾಗ ದುಡಿಯುವ ಆಸಕ್ತಿಯೂ ಹೆಚ್ಚುತ್ತದೆ. ಒಬ್ಬ ಉದ್ಯೋಗಿ ತನ್ನನ್ನು ಮಾಡುವ ಕೆಲಸಕ್ಕೆ ಒಗ್ಗಿಸಿಕೊಂಡಾಗ ಮಾತ್ರ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಬಲ್ಲದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಂಯೋಜಕ, ಕನ್ನಡ ವಿಭಾಗ ಮುಖ್ಯಸ್ಥ ಡಾ ಹೆಚ್.ಜಿ. ಶ್ರೀಧರ್ ಮಾತನಾಡಿ, ಯಾವುದೇ ಒಂದು ವಿಷಯ ತುಂಬಾ ಗೋಜಲಾಗಿದೆ ಎಂದೆನಿಸಿದಾಗ ನಾವು ಆ ವಿಷಯದ ಹೊರಗೆ ಮೂರನೇ ವ್ಯಕ್ತಿಯಾಗಿ ನಿಂತು ಯೋಚಿಸಬೇಕು. ಆಗ ಸಮಸ್ಯೆಯ ಸುಳಿ ಮರೆಯಾಗುತ್ತಾ ಹೋಗುತ್ತದೆ. ಪರಿಹಾರ ಕಂಡುಕೊಳ್ಳುವುದು ಸುಲಭವೆನಿಸಿಕೊಳ್ಳುತ್ತದೆ. ನಮ್ಮ ಸರಿ- ತಪ್ಪುಗಳನ್ನು ನಾವೇ ವಿಮರ್ಶೆ ಮಾಡಬಲ್ಲೆವು ಎಂದಾದಾಗ ನಮಗೆದುರಾಗುವ ತೊಂದರೆಗಳೂ ಕಡಿಮೆಯಾಗುತ್ತಾ ಹೋಗುತ್ತವೆ. ಉಪನ್ಯಾಸಕರಾಗುವವರಿಗೆ ಈ ಗುಣ ಅತೀ ಅಗತ್ಯ ಎಂದು ನುಡಿದರು.
ಈ ಸಂದರ್ಭ ವಿಬಾಗದ ಉಪನ್ಯಾಸಕಿಯರಾದ ಸುಶ್ಮಿತಾ ಜಯಾನಂದ್, ರಾಧಿಕಾ ಕಾನತ್ತಡ್ಕ, ಪ್ರಜ್ಞಾ ಬಾರ್ಯ, ಲ್ಯಾಬ್ ಸಹಾಯಕ ಸಂತೋಷ್, ಎಂಸಿ.ಜೆ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಕ್ಷಯ್ ಕುಮಾರ್, ಶಿವಪ್ರಸಾದ್ ಹಾಗೂ ಲಿಖಿತ್ ತಮ್ಮ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿನಿ ಲಿಖಿತಾ ಗುಡ್ಡೆಮನೆ ಕಾರ್ಯಕ್ರಮ ನಿರ್ವಹಿಸಿದರು.