Saturday, November 23, 2024
ಸುದ್ದಿ

ಇದು ನಮ್ಮ ಮಂಗಳೂರು ಪೊಲೀಸ್ ; ಭಾಗ್ಯಶ್ರೀ ನಮ್ಮ ಹೆಮ್ಮೆ ” Big Salute ” ಹಾಗಾದ್ರೆ ಇವರು ಮಾಡಿದ ಸಾಧನೆ ಏನ್ ಗೊತ್ತಾ ? – ಕಹಳೆ ನ್ಯೂಸ್

ಹಸಿವು ಹಾಗೂ ಬಿಸಿಲಿನ ಬೇಗೆಗೆ ಬಸವಳಿದು ರಸ್ತೆ ಬದಿ ಬಿದ್ದಿದ್ದ ವೃದ್ದರೊಬ್ಬರಿಗೆ ಗುರುವಾರ ಸಂಚಾರಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಉಪಚರಿಸಿ ನೀರು, ಬ್ರೆಡ್ ನೀಡಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ನೇತ್ರಾವತಿ ಸೇತುವೆಯಲ್ಲಿ ಸುಮಾರು 65 ವರ್ಷದ ವೃದ್ದರೊಬ್ಬರು ಕುಸಿದು ಬಿದ್ದಿದ್ದರು. ಇದನ್ನು ನೋಡಿದ ಸಾರ್ವಜನಿಕರೊಬ್ಬರು ಸಮೀಪದ ಮಹಾಕಾಳಿ ಪಡ್ಪುನಲ್ಲಿ ಕರ್ತವ್ಯದಲ್ಲಿದ್ದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಭಾಗ್ಯಶ್ರೀ ಅವರ ಗಮನಕ್ಕೆ ತಂದಿದ್ದಾರೆ. ಭಾಗ್ಯಶ್ರೀ ಅವರು ತಕ್ಷಣ ಅವರು ಬಿದ್ದಿದ್ದ ಸ್ಥಳಕ್ಕೆ ಬಂದಿದ್ದಾರೆ.
ಸೇತುವೆ ಮೇಲೆ ಬಿದ್ದಿದ್ದ ಆ ವ್ಯಕ್ತಿಯನ್ನು ಕರೆದಾಗ ನಿತ್ರಾಣದಿಂದ ಪ್ರತಿಕ್ರಿಯಿಸಲು ಅಸಾಧ್ಯವಾದ ಸ್ಥಿತಿ ಅವರದ್ದಾಗಿತ್ತು. ಭಾಗ್ಯಶ್ರೀ ಅವರು ಆ ವ್ಯಕ್ತಿಗೆ ಕುಡಿಯುಲು ನೀರು ನೀಡಿ ಉಪಚರಿಸಿದ್ದಾರೆ. ಅಷ್ಟರಲ್ಲಿ ಅಲ್ಲಿಗಾಗಮಿಸಿದ ಆಟೋ ಚಾಲಕರೊಬ್ಬರು ಆ್ಯಪಲ್ ನೀಡಿದ್ದಾರೆ. ಅದನ್ನು ತಿಂದ ಬಳಿಕ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ.
ಭಾಗ್ಯಶ್ರೀ ಅವರು ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ವಿಷಯ ತಿಳಿಸಿದ್ದಾರೆ. ಸಾರ್ವಜನಿಕರು ಕೂಡ 108 ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆ ವ್ಯಕ್ತಿಯನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಊರು ಕನಕಮಜಲು, ಮಕ್ಕಳು, ಸಂಬಂಧಿಗಳು ಇದ್ದಾರೆ ಎಂದಷ್ಟೇ ಆ ವ್ಯಕ್ತಿ ತಿಳಿಸಿದ್ದಾರೆ. ಕಾನ್‌ಸ್ಟೇಬಲ್ ಅವರು ಊಟ ಮಾಡುತ್ತೀರಾ? ತಿಂಡಿ ತಿನ್ನುತ್ತೀರಾ? ಎಂದು ಕೇಳಿದ್ದಾರೆ. ಸ್ಥಳೀಯ ಅಂಗಡಿಯಿಂದ ಬನ್ಸ್ ತಂದು ಕೊಟ್ಟಿದ್ದಾರೆ. ಅದನ್ನು ತಿಂದ ವೃದ್ದ ಒಂದಷ್ಟು ಸುಧಾರಿಸಿಕೊಂಡರು. ಅಷ್ಟರಲ್ಲಿ 108 ಅಂಬ್ಯುಲೆನ್ಸ್ ಹಾಗೂ ಸಾಗರ ಕವಚ ಪೊಲೀಸ್ ವಾಹನ ಕೂಡ ಸ್ಥಳಕ್ಕೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


* ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ ಸಿಬ್ಬಂದಿ: ಬಡ ರೋಗಿಗಳನ್ನು ಕರೆದೊಯ್ಯಲೆಂದೇ ಇರುವ ಸರ್ಕಾರದ 108 ಆಂಬ್ಯುಲೆನ್ಸ್ ಸಿಬ್ಬಂದಿ ಬಡ ವೃದ್ದನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದಾರೆ. ಯಾಕೆ ಕರೆದೊಯ್ಯುತ್ತಿಲ್ಲ ಎಂದು ಕೇಳಿದಾಗ, ದಾರಿಯಲ್ಲಿ ಬಿದ್ದುಕೊಂಡಿದ್ದವರನ್ನು ಕರೆ ತಂದರೆ ಆಸ್ಪತ್ರೆಯವರು ಬೈತಾರೆ ಎಂದಿದ್ದಾರೆ. ಆಗ ಕಾನ್‌ಸ್ಟೇಬಲ್, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಬೇಕಾದದ್ದು ಅವರ ಕರ್ತವ್ಯ. ನನ್ನ ಕರ್ತವ್ಯ ನಾನು ಮಾಡುತ್ತೇನೆ. ನಿಮ್ಮ ಕರ್ತವ್ಯ ನೀವು ಮಾಡಿ. ವೃದ್ದಾಪ್ಯದಲ್ಲಿ ನಮ್ಮ ಸ್ಥಿತಿ ಹೇಗಾಗುತ್ತದೆ ಎಂದು ನಮಗೆ ಗೊತ್ತಿದೆಯಾ? ಎಂದು ಹೇಳಿ ಸಿಬ್ಬಂದಿಯ ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಕಾನ್‌ಸ್ಟೇಬಲ್ ಅವರ ಮಾನವೀಯತೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಕಾಳಿ ಪಡ್ಪು ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನೇತ್ರಾವತಿ ಸೇತುವೆ ಮೇಲೆ ವೃದ್ದರೊಬ್ಬರು ಬಿದ್ದುಕೊಂಡಿರುವ ಮಾಹಿತಿ ತಿಳಿದು ಅವರನ್ನು ಉಪಚರಿಸಿ, ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇನೆ. ಮನುಷ್ಯರಾಗಿ ಮನುಷ್ಯರಿಗೆ ಸಹಾಯ ಮಾಡುವುದು ನಮ್ಮ ಧರ್ಮ.
ಭಾಗ್ಯಶ್ರೀ
ಟ್ರಾಫಿಕ್ ಕಾನ್‌ಸ್ಟೇಬಲ್

Photos: Apul Alva Ira