
ನವದೆಹಲಿ : ತಾಜ್ ಮಹಲ್ ಕುರಿತು ತಮ್ಮ ಪಕ್ಷದ ನಾಯಕರು ವಿವಾದಿತ ಹೇಳಿಕೆಗಳನ್ನು ನೀಡಿ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಿದ್ದರೆ, ಇದಕ್ಕೆ ಇತಿಶ್ರೀ ಹಾಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
ಇದೇ ಮೊದಲ ಬಾರಿಗೆ ಅವರು ತಾಜ್ ಮಹಲ್ ಕುರಿತು ಪ್ರತಿಕ್ರಿಯಿಸಿದ್ದಾರೆ. ಪಾರಂಪರಿಕ ಕಟ್ಟಡಗಳನ್ನು ಮರೆತು ಯಾವ ದೇಶವೂ ಮುಂದುವರೆಯಲು ಸಾಧ್ಯವಿಲ್ಲ, ಒಂದು ವೇಳೆ ಹಾಗೆ ಮರೆತರೆ ಒಂದಾನೊಂದು ದಿನ ತಮ್ಮ ಗುರುತನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿಗೆ ತಾಜ್ ಮಹಲ್ ಕಪ್ಪು ಚುಕ್ಕೆ ಎಂದಿದ್ದ ಶಾಸಕ
ಮಂಗಳವಾರ ಆಲ್ ಇಂಡಿಯಾ ಇನ್ಸ್’ಟಿಟ್ಯೂಟ್ ಆಫ್ ಆಯುರ್ವೇದ ವನ್ನು ರಾಷ್ಟ್ರಕ್ಕೆ ಅರ್ಪಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಶಾಸಕ ಸಂಗೀತ್ ಸೋಮ್ ತಾಜ್ ಮಹಲ್ ಕುರಿತು ವಿವಾದಿತ ಹೇಳಿಕೆ ನೀಡಿದ್ದು ತಿಳಿದದ್ದೇ. ಭಾರತೀಯ ಸಂಸ್ಕೃತಿಗೆ ತಾಜ್ ಮಹಲ್ ಒಂದು ಕಪ್ಪು ಚುಕ್ಕೆ ಎಂದು ಸಂಗೀತ್ ಸೋಮ್ ಹೇಳಿದ್ದರು. ಬಿಜೆಪಿ ಶಾಸಕನ ಈ ಹೇಳಿಕೆಗೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗಳು ಕೇಳಿ ಬಂದವು. ಉತ್ತರ ಪ್ರದೇಶ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್ ಮಹಲ್ ಹೆಸರನ್ನು ಕೈಬಿಟ್ಟಿದ್ದರಿಂದ ಈ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು.