Tuesday, November 26, 2024
ಸುದ್ದಿ

ಶಿಕ್ಷಕರ ವಾರ್ಷಿಕ ವೇತನ ಬಡ್ತಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು: ಶಿಕ್ಷಕರ ಸಂಘಟನೆಗಳಿಂದ ಒತ್ತಾಯ – ಕಹಳೆ ನ್ಯೂಸ್

ಬೆಂಗಳೂರು: ಪ್ರೌಢಶಾಲೆಯ ಸುಮಾರು 10 ಸಾವಿರ ಹಾಗೂ ಪಿಯು ಕಾಲೇಜಿನ ಅಂದಾಜು 2 ಸಾವಿರ ಉಪನ್ಯಾಸಕರು ಒಂದು ವಿಶೇಷ ವಾರ್ಷಿಕ ವೇತನ ಬಡ್ತಿಯಿಂದ ವಂಚಿತರಾಗಿದ್ದಾರೆ.

ಈ ಸಮಸ್ಯೆ ಸರಿದೂಗಿಸುವಂತೆ ಶಿಕ್ಷಕ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ ನೀಡಿದ ನಂತರ ಈ ಖಾತೆ ಮುಖ್ಯಮಂತ್ರಿ ಬಳಿಯೇ ಇದ್ದು ಸಮಸ್ಯೆ ಸರಿಪಡಿಸಲೇಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಅನ್ಯಾಯಕ್ಕೆ ಒಳಗಾದ ಶಿಕ್ಷಕರಿಗೆ ಒಂದು ವಿಶೇಷ ವಾರ್ಷಿಕ ವೇತನ ಬಡ್ತಿ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ 26-30 ಕೋಟಿ ರೂ. ಹೊರೆ ಬೀಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

2008ರ ಆ. 1ರ ನಂತರ ನೇಮಕಗೊಂಡ ಶಿಕ್ಷಕರಿಗೆ ಹಿಂದಿನ ಸರ್ಕಾರದ ಆದೇಶದಂತೆ ವಿಶೇಷ ಭತ್ಯೆ (ಹೈಸ್ಕೂಲ್ ಶಿಕ್ಷಕರಿಗೆ 400 ರೂ., ಪಿಯು ಉಪನ್ಯಾಸಕರಿಗೆ 500 ರೂ.) ಪಡೆಯಲು ಅವಕಾಶ ಇರಲಿಲ್ಲ. ಅದಾಗ್ಯೂ ಅಂದಿನ ಶಿಕ್ಷಣ ಸಚಿವರ ಮೌಖಿಕ ಆದೇಶದ ಪ್ರಕಾರ ಕೆಲವು ಶಿಕ್ಷಕರು ವಿಶೇಷ ಭತ್ಯೆ ಪಡೆಯುತ್ತಿದ್ದರು. ಮತ್ತೆ ಕೆಲವರಿಗೆ ಈ ಭತ್ಯೆ ಭಾಗ್ಯ ಸಿಕ್ಕಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

6ನೇ ವೇತನ ಆಯೋಗ ಈ ವಿಶೇಷ ಭತ್ಯೆ ರದ್ದುಗೊಳಿಸಿ ಮೂಲವೇತನದಲ್ಲಿ ಸೇರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸರ್ಕಾರ ಆ ಶಿಫಾರಸು ಅನುಷ್ಠಾನಗೊಳಿಸಿದ್ದೂ ಆಯಿತು. ಜತೆಗೆ ಈ ಹಿಂದೆ ವಿಶೇಷ ಭತ್ಯೆ ತೆಗೆದುಕೊಳ್ಳುತ್ತಿರುವವರ ವಿಶೇಷ ಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಲಾಯಿತು. ಆದರೆ, ವಿಶೇಷ ಭತ್ಯೆ ಯಾರು ಪಡೆಯುತ್ತಿರಲಿಲ್ಲವೋ ಅಂಥವರು ಒಂದು ವಿಶೇಷ ವಾರ್ಷಿಕ ವೇತನ ಬಡ್ತಿಯಿಂದ ವಂಚಿತರಾದರು. ಅಂಥ ಶಿಕ್ಷಕರು ಈಗ ನ್ಯಾಯ ಕೇಳುತ್ತಿದ್ದಾರೆ.

ಕಾನೂನು ವಿರುದ್ಧವಾಗಿ ಕೆಲವರು ವಿಶೇಷ ಭತ್ಯೆ ಪಡೆಯುತ್ತಿದ್ದರು. ಅಂಥವರಿಗೆ ಒಂದು ವಿಶೇಷ ವಾರ್ಷಿಕ ವೇತನ ಬಡ್ತಿ ಸಲೀಸಾಗಿ ಸಿಕ್ಕಿದೆ. ಅತ್ತ ಯಾವುದೇ ತಪ್ಪು ಮಾಡದ ಹಾಗೂ ವಿಶೇಷ ಭತ್ಯೆಯಿಂದಲೂ ವಂಚಿತರಾದ ಸುಮಾರು 12 ಸಾವಿರ ಶಿಕ್ಷಕರು ವಿಶೇಷ ವಾರ್ಷಿಕ ವೇತನ ಬಡ್ತಿ ಸಿಗದೆ ಅನ್ಯಾಯಕ್ಕೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಸುಮಾರು 2 ಲಕ್ಷ ಶಿಕ್ಷಕರಿದ್ದು, ಆ ಪೈಕಿ 12 ಸಾವಿರ ಶಿಕ್ಷಕರಿಗೆ ಮಾತ್ರ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

ಶಿಕ್ಷಕರ ವಿಶೇಷ ವಾರ್ಷಿಕ ವೇತನ ಬಡ್ತಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು ಎಂದು ಶಿಕ್ಷಕರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತಂದಿವೆ. ಈ ಒತ್ತಡ ಬೆಳಗಾವಿ ಅಧಿವೇಶನದಲ್ಲೂ ಮಾರ್ದನಿಸುವ ಸಾಧ್ಯತೆಗಳಿವೆ.