ಕಾರವಾರ: ದೇಶದಲ್ಲಿಯೇ ಅಣುವಿದ್ಯುತ್ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಕಾರವಾರ ತಾಲೂಕಿನಲ್ಲಿರುವ ಕೈಗಾ ಅಣುವಿದ್ಯುತ್ ಘಟಕ ವಿಶ್ವದಾಖಲೆ ನಿರ್ಮಿಸಿದೆ.
ಕೈಗಾ ಒಂದನೇ ಘಟಕವು ಸತತ 941 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಇಂದು ವಿಶ್ವದಾಖಲೆ ನಿರ್ಮಿಸಿದೆ. 2000 ನೇ ಇಸವಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಘಟಕ 1 ನಿರ್ಮಾಣ ಮಾಡಲಾಗಿತ್ತು.
ನಂತರ ಮೇ 15, 2016ರಿಂದ ಕೈಗಾ ಒಂದನೇ ಘಟಕವು ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಂಡು ಬಂದಿದ್ದು ಸೋಮವಾರ ಬೆಳಗ್ಗೆ 9.15ಕ್ಕೆ ಈ ದಾಖಲೆ ಬರೆದಿದೆ.
ಕಳೆದ 941 ದಿನದಲ್ಲಿ 4,900 ದಶಲಕ್ಷ ಯೂನಿಟ್ ಅಣುವಿದ್ಯುತ್ ಅನ್ನು ನಿರಂತರವಾಗಿ ಉತ್ಪಾದನೆ ಮಾಡಿದೆ. ಈ ಹಿಂದೆ ವಿಶ್ವದಲ್ಲಿಯೇ ಬ್ರಿಟನ್‍ನ ಹೇಶಾಮ್ ಅಣುವಿದ್ಯುತ್ ಘಟಕ 940 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡಿತ್ತು. ಈಗ ಈ ದಾಖಲೆಯನ್ನು ಮುರಿಯುವ ಮೂಲಕ ವಿಶ್ವದಲ್ಲೇ ಮೊದಲ ನಿರಂತರ ವಿದ್ಯುತ್ ಉತ್ಪಾದನೆ ಮಾಡಿದ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ದೇಶಕ್ಕೆ ಹೆಮ್ಮೆ ತಂದಿದೆ.
ದಿವಂಗತ ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರು 2000 ಇಸ್ವಿಯ ನವೆಂಬರ್ 16 ರಂದು ಕೈಗಾ ಅಣುಸ್ಥಾವರನ್ನು ದೇಶಕ್ಕೆ ಸಮರ್ಪಿಸಿದ್ದರು.