Saturday, September 21, 2024
ಸುದ್ದಿ

ಇಂದಿನಿಂದ 16 ರವರೆಗೆ ಕದ್ರಿ ಬಾಲ ಯಕ್ಷಕೂಟ ದಶಮ ಸಂಭ್ರಮ – ಕಹಳೆ ನ್ಯೂಸ್

ಮಂಗಳೂರು: ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ವಠಾರದ ಶ್ರೀಮಾತಾ ಕೃಪಾದಲ್ಲಿ ಪ್ರಾರಂಭಗೊಂಡ ಬಾಲ ಯಕ್ಷಕೂಟ(ರಿ) ಕದ್ರಿ ದಶಮ ವರ್ಷದ ಸಂಭ್ರಮದಲ್ಲಿದೆ. ಹೌದು, ಕದ್ರಿಯ ಎಲ್ಲೂರು ರಾಮಚಂದ್ರ ಭಟ್ ಅವರು ಮಹಾನಗರದ ಆಸಕ್ತ ಮಕ್ಕಳಿಗೆ, ಮಹಿಳೆಯರಿಗೆ ಕರಾವಳಿ ಸಾಂಸ್ಕೃತಿಕ ಹೆಮ್ಮೆಯಾದ ಯಕ್ಷಗಾನ ಕಲೆಯನ್ನು ಉಚಿತವಾಗಿ ಬೋಧಿಸುತ್ತಿದ್ದಾರೆ.

ಶಾಸ್ತ್ರೀಯ ಕಲಿಕೆ ಇಲ್ಲಿನ ವಿಶೇಷ. ಪ್ರಾಥಮಿಕ ಹೆಜ್ಜೆಗಾರಿಕೆಯಿಂದ ತೊಡಗಿ ಪ್ರವೇಶ, ಕುಣಿತ, ತಾಳಕ್ರಮಗಳು, ನೃತ್ಯಾಭಿನಯ, ಮಾತುಗಾರಿಕೆ, ಬಣ್ಣಗಾರಿಕೆ, ವೇಷಗಾರಿಕೆ, ರಂಗನಡೆ, ಪ್ರಸಂಗ ನಡೆ ಹೀಗೆ ಮುಮ್ಮೇಳದ ಪೂರ್ಣ ಸ್ವರೂಪ ಮತ್ತು ಹಿಮ್ಮೇಳವಾದನ ಚೆಂಡೆ-ಮದ್ದಳೆಗಳ ತರಬೇತಿ ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಯಕ್ಷಕೂಟ ತಂಡವು ರಾಜ್ಯ, ಹೊರರಾಜ್ಯದಲ್ಲಿ ಪೌರಾಣಿಕ ಪ್ರಸಂಗಗಳ ಯಶಸ್ವಿ ಪ್ರದರ್ಶನ ನೀಡಿ, ಪ್ರಶಸ್ತಿ ಬಹುಮಾನಗಳನ್ನು ಗಳಿಸಿದೆ. ಕಲಾವಿದರಾದ ರಂಜಿತಾ ಎಲ್ಲೂರು, ರಕ್ಷಿತಾ ಎಲ್ಲೂರು ಗುರುಗಳ ಜತೆ ಭಾರತದ ರಾಷ್ಟ್ರಪತಿ ಭವನದಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಕೀರ್ತಿ ತಂದಿದ್ದಾರೆ.

ಜಾಹೀರಾತು

ಇವತ್ತಿನಿಂದ ೧೬ ರವರೆಗೆ ಐದು ದಿನಗಳ ನಿರಂತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾದರಪಡಿಸುತ್ತಿದೆ. ಬಾಲ ಯಕ್ಷಕೂಟವು ದಶ ವರ್ಷದ ಸಂಭ್ರಮ ಡಿ.೧೨ ರಿಂದ ೧೬ ರವರೆಗೆ ಕದ್ರಿ ರಾಜಾಂಗಣದಲ್ಲಿ ನಡೆಯಲಿದೆ. ೧೨ ರಂದು ಸಂಜೆ ೬ ಗಂಟೆಗೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸುವರು.

ಶ್ರೀಕ್ಷೇತ್ರ ಕದ್ರಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ. ಜೆ. ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಇಡ್ಯ ಶಂಕರನಾರಾಯಣ ಭಟ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಬೋಳಾರ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ತಾರಾನಾಥ ಶೆಟ್ಟಿ, ಕದ್ರಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಭಾಗವಹಿಸುವರು.

ಉದ್ಘಾಟನಾ ಸಮಾರಂಭಕ್ಕೆ ಮುನ್ನ ಸಂಜೆ ೪ ರಿಂದ ೬ ರವರೆಗೆ ದಿನೇಶ್ ಕೋಡಪದವು ಸಾರಥ್ಯದಲ್ಲಿ ಯಕ್ಷ ಹಾಸ್ಯ ಸಿಂಚನ ನಡೆಯಲಿದೆ. ಸಂಜೆ ೭ ಕ್ಕೆ ಕದ್ರಿ ದಿ. ರಾಮಚಂದ್ರ ದೇವಾಡಿಗ ಇವರ ಸಂಸ್ಮರಣೆ ನಡೆಯಲಿದೆ. ೭.೩೦ ರಿಂದ ಬಾಲ ಯಕ್ಷಕೂಟದ ಕಲಾವಿದರಿಂದ ಸುದರ್ಶನ ಗರ್ವಭಂಗ ಯಕ್ಷಗಾನ ಪ್ರದರ್ಶನವಾಗಲಿದೆ.

೧೩ ರಂದು ಸಂಜೆ ೫ ಗಂಟೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಪ್ರಾಯೋಜಕತ್ವದಲ್ಲಿ ಯಕ್ಷಕೂಟ ಕಲಾವಿದರಿಂದ ಕರಂಡಕಾಸುರ ವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ ೭ ಗಂಟೆಗೆ ದಿ. ಶಂಕರನಾರಾಯಣ ಅಡಿಗ ಕದ್ರಿ ಅವರ ಸಂಸ್ಮರಣೆ ನಡೆಯಲಿದೆ.

೭.೩೦ ರಿಂದ ರಾತ್ರಿ ೧೦ರವರೆಗೆ ಪಟ್ಲ ಸತೀಶ್ ಶೆಟ್ಟಿ ಭಾಗವತರ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಮಹಿಳಾ ಕಲಾವಿದೆಯರಿಂದ ಹರಿಭಕ್ತ ಸುಧನ್ವ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ೧೪ ರಂದು ಸಂಜೆ ೫ ರಿಂದ ಮಹಿಳಾ ಯಕ್ಷಕೂಟ ಕದ್ರಿ ಇವರಿಂದ ನರಕಾಸುರ ಮೋಕ್ಷ ಯಕ್ಷಗಾನ ಪ್ರದರ್ಶನ, ಸಂಜೆ ೭ ಕ್ಕೆ ದಿ. ಶೇಷಪ್ಪ ದೇವಾಡಿಗ ಕದ್ರಿ ಸಂಸ್ಮರಣೆ, ಬಳಿಕ ಸಂಜೆ ೭.೩೦ ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಚಿತ್ರಸೇನ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

೧೫ ರಂದು ಮಧ್ಯಾಹ್ನ ೩ ರಿಂದ ಪ್ರಸಿದ್ಧ ಕಲಾವಿದರಿಂದ ವಾಲಿಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.ಸಂಜೆ ೭ ಗಂಟೆಗೆ ದಿ. ಬಾಲಕೃಷ್ಣ ಶೆಟ್ಟಿ ಕದ್ರಿ ಸಂಸ್ಮರಣೆ ಬಳಿಕ ಸಂಜೆ ೭.೩೦ ರಿಂದ ಪ್ರಸಿದ್ಧ ಕಲಾವಿದರಿಂದ ಕಬಂದ ಮೋಕ್ಷ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಡಿ.೧೬ ರಂದು ಬೆಳಗ್ಗೆ ೧೦ರಿಂದ ವಿದ್ವಾನ್ ಕೃಷ್ಣರಾಜ ನಂದಳಿಕೆ ಇವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತ ಬಳಿಕ ಮದ್ಯಾಹ್ನ ೨ ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮಾಧ್ಯಮ ಮಿತ್ರ ವೃಂದ ಕಲಾವಿದರಿಂದ ಶಕ್ರಾರಿ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ ೪ ರಿಂದ ಬಾಲಯಕ್ಷಕೂಟ ಹಳೆ ವಿದ್ಯಾರ್ಥಿಗಳಿಂದ ಯೋಗಿನಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸಂಜೆ ೬ರಿಂದ ಸಮಾರೋಪ ನಡೆಯಲಿದೆ. ಉದ್ಯಮಿ ಶ್ರೀಪತಿ ಭಟ್ ಅಲಂಗಾರು ಅಧ್ಯಕ್ಷತೆ ವಹಿಸಲಿದ್ದು, ವಿದ್ವಾಂಸ ಡಾ. ಪ್ರಭಾಕರ ಜೋಷಿ ಸಮಾರೋಪ ಭಾಷಣ ಮಾಡುವರು. ಕೇಂಜ ಶ್ರೀಧರ ತಂತ್ರಿ, ಹರಿಕೃಷ್ಣ ಪುನರೂರು, ಕಟೀಲು ಕಮಲಾದೇವಿಪ್ರಸಾದ ಅಸ್ರಣ್ಣ, ಪುರುಷೋತ್ತಮ ಭಂಡಾರಿ, ಕಾರ್ಪೋರೇಟರ್ ಅಶೋಕ್ ಕುಮಾರ್ ಡಿ.ಕೆ.ಮತ್ತು ರೂಪಾ ಡಿ. ಬಂಗೇರ ಭಾಗವಹಿಸುವರು.

ಗೌರವ ಸನ್ಮಾನ: ಬಾಲಯಕ್ಷಕೂಟ ದಶಮಾನೋತ್ಸವ ಸನ್ಮಾನ ಗೌರವವು ರಾಷ್ಟ್ರಪ್ರಶಸ್ತಿ ಪುರಷ್ಕೃತ ಕೆ ಗೋವಿಂದ ಭಟ್, ಕೆ.ಎಲ್. ಕುಂಡಂತಾಯ, ಉಜಿರೆ ಅಶೋಕ ಭಟ್, ದಯಾನಂದ ಕೋಡಿಕಲ್ ಅವರಿಗೆ ಅರ್ಪಣೆಯಾಗಲಿದೆ. ಕೃಷ್ಣರಾಜ ನಂದಳಿಕೆ ಮತ್ತು ಗಂಗಾಧರ ಶೆಟ್ಟಿಗಾರ್ ಇವರಿಗೆ ಗೌರವಾರ್ಪಣೆ ಜರುಗಿದ ಬಳಿಕ ಕದ್ರಿ ವಿಷ್ಣು ಅವರ ಸಂಸ್ಮರಣೆ ನಡೆಯಲಿದೆ. ಸಂಜೆ ೭.೩೦ ರಿಂದ ಪ್ರಸಿದ್ಧ ಕಲಾವಿದರಿಂದ ಮೈರಾವಣ ಕಾಳಗ ಎಂಬ ಯಕ್ಷಗಾನ ಪ್ರದರ್ಶನವಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಬಾಲಯಕ್ಷ ಕೂಟ ಕದ್ರಿ ದಶಮಾನೋತ್ಸವ ಸಮಿತಿಯ ಸಂಚಾಲಕ ಎಲ್ಲೂರು ರಾಮಚಂದ್ರ ಭಟ್ ಕದ್ರಿ, ಅಧ್ಯಕ್ಷ ಕೆ.ಕೃಷ್ಣ ಭಟ್, ಉಪಾಧ್ಯಕ್ಷ ಆರ್.ಕೆ.ರಾವ್, ಕೋಶಾಧಿಕಾರಿ ಕೃಷ್ಣರಾಜ ನಂದಳಿಕೆ, ಜಿತೇಂದ್ರ ಕುಂದೇಶ್ವರ ಇದ್ದರು.