ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳುತ್ತಿದ್ದ ಸುಳ್ಳುಗಳು ಸುಪ್ರೀಂಕೋರ್ಟ್ ನಲ್ಲಿ ಬಹಿರಂಗವಾಗಿದೆ ಎಂದು ಹೇಳಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಬಗ್ಗೆ ರಾಹುಲ್ ನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.
ಈ ಬಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, ಈ ವಿಚಾರವಾಗಿ ಸಂಸತ್ತಿನ ಜಂಟಿ ಸಮಿತಿ ನೇಮಕ ಮಾಡಬೇಕು ಮತ್ತು ಇದರಿಂದ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಳು ಹೇಳುವುದು ನಿಲ್ಲುತ್ತದೆ. ಈ ಬಗ್ಗೆ ಸದನದಲ್ಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಶಾ ತಿಳಿಸಿದರು.
ರಫೆಲ್ ಫೈಟರ್ ಜೆಟ್ ಗಳ ಒಪ್ಪಂದದ ತನಿಖೆ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ತಿರಸ್ಕೃತವಾಗಿದೆ. ಜನರನ್ನು ತಪ್ಪು ದಾರಿಗೆ ಎಳೆದಿರುವ ರಾಹುಲ್ ಗಾಂಧಿ ಈ ಬಗ್ಗೆ ರಾಷ್ಟ್ರದ ಜನರಲ್ಲಿ ಕ್ಷಮೆಯಾಚಿಸಬೇಕು. ರಫೆಲ್ ಒಪ್ಪಂದದ ಬಗ್ಗೆ ಸಿಕ್ಕಿರುವಂತಹ ಮಾಹಿತಿಯ ಮೂಲ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.