ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರಿನ ಸುಳವಾಡಿಯ ‘ವಿಷ ಪ್ರಸಾದ’ ಸೇವನೆಯ ಪ್ರಕರಣ ಇಡೀ ರಾಜ್ಯವನ್ನೂ ದುಃಖದಲ್ಲಿ ಮುಳುಗಿಸಿದೆ. ಅನ್ನ ಪ್ರಸಾದಕ್ಕೆ ವಿಷ ಬೆರೆಸಿದ ಶಂಕೆಯ ಹಿನ್ನಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ರಾಜ್ಯದಲ್ಲಿ ಹಿಂದೆಂದೂ ಕೇಳರಿಯದಂತಹ ದುರಂತವೊಂದು ನಡೆದಿದೆ. ತಾವು ನಂಬುವ ದೇವರ ಪ್ರಸಾದವನ್ನು ಸೇವಿಸಿದ ನೂರಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದು, ಈ ಪೈಕಿ ಈಗಾಗಲೇ 11 ಮಂದಿ ಸಾವಿಗೀಡಾಗಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ಗೋಪುರ ಶಂಕುಸ್ಥಾಪನೆ ಸಮಾರಂಭದ ನಿಮಿತ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ರೂಪವಾಗಿ ರೈಸ್ ಬಾತ್ ನೀಡಲಾಗಿದೆ.
ಆದರೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಪ್ರಸಾದಕ್ಕೆ ಕೆಲವರು ಕ್ರಿಮಿನಾಶಕ ಬೆರೆಸಿದ್ದರೆಂದು ಹೇಳಲಾಗುತ್ತಿದ್ದು, ಇದನ್ನು ಸೇವಿಸಿ ಈಗಾಗಲೇ 11 ಮಂದಿ ಸಾವನ್ನಪ್ಪಿದ್ದು ಹಲವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಯಾರದೋ ಮೇಲಿನ ದ್ವೇಷ ತೀರಿಸಿಕೊಳ್ಳಲು ನಡೆದಿರುವ ಈ ಹೀನ ಕೃತ್ಯಕ್ಕೆ ಅಮಾಯಕರು ಬಲಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಂಕೆ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.