ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪುರಾತನ ಐತಿಹಾಸಿಕ ದೇವಾಲಯಗಳಲ್ಲಿ ನೆಲ್ಲಿತೀರ್ಥ ಸೋಮಾನಾಥೇಶ್ವರ ದೇವಸ್ಥಾನವು ಒಂದಾಗಿದ್ದು ಪ್ರಾಮುಖ್ಯತೆ ಪಡೆದಿದೆ. ಈ ದೇವಸ್ಥಾನವು ಮಂಗಳೂರಿನಿಂದ ಸುಮಾರು 31ಕಿ.ಮೀ ದೂರವಿರುವ ಹಚ್ಚಹಸುರಿನ ಪ್ರಕೃತಿ ಮಡಿಲ್ಲಲಿದೆ. ಇಂದು ನೆಲ್ಲಿತೀರ್ಥ ಕ್ಷೇತ್ರವು ಭಕ್ತರ, ಪ್ರವಾಸಿಗರ ಪ್ರಮುಖ ಆರಾಧ್ಯ ಕೇಂದ್ರಗಳಲ್ಲಿ ಒಂದಾಗಿದೆ. ನೆಲ್ಲಿತೀರ್ಥ ಗುಹೆಯು ಭಕ್ತರ ದರ್ಶನಕ್ಕೆ ಈ ವರ್ಷ ಅಕ್ಟೋಬರ್ 17ರ ತುಲಾಸಂಕ್ರಮಣದಂದು ತೆರೆದುಕೊಳ್ಳುತ್ತದೆ.
ಗುಹೆಯ ವೈಶಿಷ್ಟ್ಯ:
ನೆಲ್ಲಿತೀರ್ಥ ಸೋಮನಾಥೇಶ್ವರ ದೇವಾಲಯದ ಪ್ರಮುಖ ಆಕರ್ಷಣೆ ಇಲ್ಲಿರುವ ಗುಹೆ. ದೇವಸ್ಥಾನದ ಪ್ರವೇಶದ್ವಾರದ ಬಲಬದಿಯಲ್ಲಿ ಗುಹೆಯಿದ್ದು ಸುಂದರವಾಗಿದೆ. ಸುಮಾರು 2೦೦ ಮೀಟರ್‌ನಷ್ಟು ಉದ್ದವಾಗಿರುವ ಈ ಗುಹೆಯಲ್ಲಿ ಜಾಬಾಲಿ ಮಹರ್ಷಿಗಳು ಶ್ರೀ ದುರ್ಗಾಪರಮೇಶ್ವರಿಯನ್ನು ಒಲಿಸಿಕೊಳ್ಳಲು ತಪಸ್ಸನಾಚರಿಸಿದ್ದರು ಎಂಬುದು ಶ್ರೀ ಕ್ಷೇತ್ರದ ಇತಿಹಾಸದಿಂದ ತಿಳಿದು ಬರುತ್ತದೆ. ಗುಹೆಯ ಮೇಲ್ಬಾಗದ ಕಲ್ಲುಗಳಲ್ಲಿರುವ ನೆಲ್ಲಿಯ ಸಸ್ಯಗಳಿಂದ ತೊಟ್ಟಿಕ್ಕುವ ನೀರಿನಿಂದಾಗಿ ‘ನೆಲ್ಲಿತೀರ್ಥ’ ಎಂಬ ಹೆಸರು ಈ ಕ್ಷೇತ್ರಕ್ಕೆ ಬಂದಿದೆ.
ಜಾಬಾಲಿ ಮಹರ್ಷಿಗಳ ತಪಸ್ಸಿಗೆ ಮೆಚ್ಚಿದ ಶ್ರೀದುರ್ಗಾಪರಮೇಶ್ವರಿಯು ಪ್ರತ್ಯಕ್ಷಳಾಗಿ ದುಷ್ಟ ಅರುಣಾಸುರನನ್ನು ಮಣಿಸುವ ಭರವಸೆ ನೀಡುವಳು. ಅಂತೆಯೇ ದುರ್ಗೆಯು ನಂದಿನಿ ಹೊಳೆಯ ಸಮೀಪ ದುಂಬಿಯ ರೂಪ ತಾಳಿ ಅರುಣಾಸುರನನ್ನು ಕೊಲ್ಲುವಳು. ಮುಂದೆ ದುರ್ಗಾಪರಮೇಶ್ವರಿಯು ಅಲ್ಲೆ ನೆಲೆಸುವಳು. ಇಂದು ಆ ಕ್ಷೇತ್ರವು ಕಟೀಲು ಎಂದು ಪ್ರಸಿದ್ದಿ ಪಡೆದಿದ್ದು ನೆಲ್ಲಿತೀರ್ಥ ಕ್ಷೇತ್ರದ ಸಮೀಪದಲ್ಲೇ ಕಂಡು ಬರುತ್ತದೆ.
ಗುಹೆಯ ಒಳಗಡೆ ಸಂಪೂರ್ಣ ಕತ್ತಲಿದ್ದು ಬೆಳಕಿಗಾಗಿ ಅಲ್ಲಲ್ಲಿ ದೀಪಗಳನ್ನು ಹಚ್ಚಿಡಲಾಗುತ್ತದೆ. ಗುಹೆಯ ಪ್ರವೇಶದ್ವಾರವು ವಿಶಾಲವಾದ ದಾರಿಯನ್ನು ಹೊಂದಿದ್ದು ನಂತರ ಚಿಕ್ಕದಾಗುತ್ತ ಸಾಗುತ್ತದೆ. ಕೆಲವೊಂದು ಕಡೆ ಬಾಗಿಕೊಂಡು ನಂತರ ತೆವಳಿಕೊಂಡು ಸಾಗಿದಂತೆ ಗುಹೆಯೊಳಗೆ ತಲುಪಬಹುದು.ಗುಹೆಯೊಳಗೆ ವಿಶಾಲವಾದ ಪ್ರದೇಶವಿದ್ದು ತುಸು ಎತ್ತರದಲ್ಲಿ ಸುಂದರವಾದ ಭೂಲಿಂಗವಿದೆ. ಲಿಂಗದ ಪಕ್ಕದಲ್ಲಿ ವಿಪುಲ ಜಲರಾಶಿಯು ಹರಿಯುತ್ತಿದ್ದು ಈ ಜಲವನ್ನು ಭಕ್ತರು ಶಿವನಿಗೆ ಅಭಿಷೇಕ ಮಾಡಿ ಧನ್ಯರಾಗುತ್ತಾರೆ. ಗುಹೆಯು ಔಷಧಿ ಗುಣವುಳ್ಳ ಮಣ್ಣು ಹೊಂದಿದ್ದು ಭಕ್ತರು ತಮ್ಮ ಚರ್ಮ ಸಂಬಂಧಿ ಸಮಸ್ಯೆಗಳಿಗೆ ದೇಹಕ್ಕೆ ಲೇಪಿಸಿಕೊಳ್ಳುತ್ತಾರೆ. ಅಲ್ಲಿಂದ ಮುಂದೆ ಗುಹೆಯ ದಾರಿಯು ಸಾಗುತ್ತದರೂ ಅಪಾಯದ ರೀತಿಯಲ್ಲಿರುವುದರಿಂದ ಆ ದಾರಿಯನ್ನು ಮುಚ್ಚಲಾಗಿದೆ.
ನೆಲ್ಲಿತೀರ್ಥ ಗುಹಾಲಯವು ವರ್ಷದ ಆರು ತಿಂಗಳುಗಳ ಕಾಲ ಮುಚ್ಚಿದ್ದು ನಂತರದ ಅವಧಿಯಲ್ಲಿ ತೆರೆದಿರುತ್ತದೆ. ಗುಹೆ ಮುಚ್ಚಿರುವ ಆರು ತಿಂಗಳ ಅವಧಿಯಲ್ಲಿ ದೇವಾನು ದೇವತೆಗಳು, ಋಷಿಗಳು ಶಿವನ ದರ್ಶನ ಪಡೆಯುವರು ಎಂದು ನಂಬಿಕೆಯಿದೆ. ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮುಖ್ಯ ದೇವರು. ದೇವಸ್ಥಾನದ ಪಕ್ಕದಲ್ಲಿ ಮಹಾಗಣಪತಿ ಮತ್ತು ಜಾಬಾಲಿ ಮಹಿರ್ಷಿ ಗುಡಿಗಳಿವೆ. ಅಲ್ಲದೆ ತುಳುನಾಡಿನ ಭೂತರಾಧನೆಯ ಪ್ರಮುಖ ದೈವಗಳಾದ ಪಿಲಿಚಾಮುಂಡಿ, ಕ್ಷೇತ್ರಪಾಲ, ರಕ್ತೇಶ್ವರಿ ಮತ್ತು ಧೂಮಾವತಿ ಇಲ್ಲಿವೆ. ದೇವಸ್ಥಾನದ ಉತ್ತರಕ್ಕೆ ‘ನಾಗಪ್ಪ ಕೆರೆ’ ಎಂಬ ಹೆಸರಿನ ನೈಸರ್ಗಿಕ ಕೆರೆಯಿದೆ. ಗುಹೆಯನ್ನು ಪ್ರವೇಶಿಸ ಬಯಸುವ ಭಕ್ತರು ಮೊದಲು ಈ ಕೆರೆಯಲ್ಲಿ ಸ್ನಾನ ಮಾಡಬೇಕು.
ಮಾರ್ಗ ಸೂಚಿ :
1. ಮಂಗಳೂರು-ಮೂಡಬಿದಿರೆ ಮಾರ್ಗವಾಗಿ ಸಾಗಿ ಎಡಪದವು ಸ್ಥಳದಲ್ಲಿ ಇಳಿದು ನಂತರ 8ಕಿ.ಮೀ ಪ್ರಯಾಣ ಮಾಡಿ ದೇವಸ್ಥಾನ ತಲುಪಬಹುದು.
2. ಬಜ್ಪೆಯಿಂದ ಪ್ರಯಾಣ ಬಯಸುವವರು ಕತ್ತಲ್‌ಸರ್ ಮಾರ್ಗದಲ್ಲಿ ಪ್ರಯಾಣ ಮಾಡಿ ತಲುಪಬಹುದು.
3. ಶ್ರೀಕ್ಷೇತ್ರ ಕಟೀಲಿನಿಂದ 8ಕಿ.ಮೀ ದೂರವಿದ್ದು ಎಕ್ಕಾರು ಸಮೀಪದ ಮಾರ್ಗದ ಮೂಲಕ ನೆಲ್ಲಿತೀರ್ಥ ಕ್ಷೇತ್ರಕ್ಕೆ ಹೋಗಬಹುದಾಗಿದೆ.
( ಸಂಗ್ರಹ ವರದಿ )