Saturday, September 21, 2024
ಸುದ್ದಿ

ಸಜೀಪಮುನ್ನೂರು ಗ್ರಾಮದಲ್ಲಿ ನಡೀತಿದೆ ಅಕ್ರಮ ಮರಳು ದಂಧೆ – ಕಹಳೆ ನ್ಯೂಸ್

ಬಂಟ್ವಾಳ: ಸಜೀಪಮುನ್ನೂರು ಗ್ರಾಮದಲ್ಲಿ ನೇತ್ರಾವತಿ ನದಿಯಿಂದ ಸಜೀಪನಡು ಗ್ರಾಮದ ಬಸ್‌ನಿಲ್ದಾಣದ ಮಾರ್ಗವಾಗಿ ಕೃಷಿ ಭೂಮಿಗಳನ್ನು ನಾಶಪಡಿಸಿ, ಲಾರಿಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸೂಕ್ತ ಕಾನೂನು ಕ್ರಮಗೈಗೊಳ್ಳುವಂತೆ ಹಾಗೂ ತಾತ್ಕಾಲಿಕ ಪರವಾನಿಗೆಯನ್ನು ರದ್ದುಪಡಿಸುವಂತೆ ದೂರು ದಾಖಲಾಗಿದೆ. ಸಜೀಪನಡು ಗ್ರಾಮದ ದೆರಾಜೆ ನಿವಾಸಿ ನಿತಿನ್ ಪೂಜಾರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಷರತ್ತು ಸಂಖ್ಯೆ 19 ರ ಪ್ರಕಾರ ಸಬ್‌ಲೀಸ್ ನೀಡಲು ಅವಕಾಶವಿಲ್ಲದಿದ್ದರೂ, ಚರಣ್, ನಿತಿನ್ ಅರಸ ಹಾಗೂ ಸುಪ್ರೀತ್ ಎನ್ನುವವರಿಗೆ ಸಬ್‌ಲೀಸ್ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಬ್‌ಲೀಸ್ ಪಡೆದವರು ಇಲ್ಲಿ ಕಾಟಾಚಾರಕ್ಕಾಗಿ 2 ದೋಣಿಗಳನ್ನು ತಂದು ನಿಲ್ಲಿಸಿ ನದಿಯಲ್ಲಿರುವ ಮರಳು ದಿಬ್ಬಗಳನ್ನು ತೆರವುಗೊಳಿಸುವ ಬದಲಾಗಿ ನದಿ ತಟದಲ್ಲಿರುವ ಮರಳುಗಳನ್ನು ದಿನವೊಂದಕ್ಕೆ ಸರಾಸರಿ 150 ರಿಂದ 200 ಲಾರಿಗಳಷ್ಟು ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜಾಹೀರಾತು

ಅಕ್ರಮ ಮರಳು ದಂಧೆಯೊಂದಿಗೆ ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಸಾಮೀಲಾಗಿರುವ ಬಗ್ಗೆ ಸಂಶಯ ಮೂಡುತ್ತಿದೆ. ಅಲ್ಲದೇ ನದಿತಟದಿಂದ ಮರಳನ್ನು ತುಂಬಿಕೊಂಡು ಬರುವ ನೂರಾರು ಲಾರಿಗಳು ಸಜೀಪನಡು ಬಸ್ಟೆಂಡ್ ಸನಿಹದಲ್ಲಿಯೇ ಟ್ರಿಪ್ ಜಾಸ್ತಿಮಾಡುವ ಭರಾಟೆಯಲ್ಲಿ ಅತ್ಯಂತ ರಭಸದಿಂದ ಸಂಚರಿಸುತ್ತಿದೆ.

ಬಸ್ಟೇಂಡ್ ಪಕ್ಕದಲ್ಲಿಯೇ ಸರಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆಯಿದ್ದು, ಮಿತಿಮೀರಿದ ಮರಳಿನ ಲಾರಿಗಳಿಂದ ವಿದ್ಯಾರ್ಥಿಗಳು ಭಯಬೀತರಾಗಿದ್ದಾರೆ.

ಆದುದರಿಂದ ಈ ಬಗ್ಗೆ ತನಿಖೆಯನ್ನು ನಡೆಸಿ ಕಾನೂನು ಕ್ರಮವನ್ನು ಜರಗಿಸಿ ಮರಳು ದಿಬ್ಬಗಳನ್ನು ತೆಗೆಯಲು ನೀಡಿದ ತಾತ್ಕಾಲಿಕ ಪರವಾಣಿಗೆಯನ್ನು ರದ್ದುಪಡಿಸಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಅವರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.