Saturday, November 23, 2024
ಸುದ್ದಿ

ಯುವಜನತೆ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು: ಡಾ.ಕೃಷ್ಣ ಭಟ್ – ಕಹಳೆ ನ್ಯೂಸ್

ಪುತ್ತೂರು: ಹಿರಿಯರ ನಂಬಿಕೆಯನ್ನು ವಿಜ್ಞಾನದ ಆಧಾರದ ಮೇಲೆ ಪ್ರಶ್ನೆ ಮಾಡುವ ಕಾಲಘಟ್ಟದಲ್ಲಿದ್ದೇವೆ. ನಮ್ಮಲ್ಲಿ ಇಂದು ಮೂಲನಂಬಿಕೆ ಕಡಿಮೆಯಾಗುತ್ತಿದ್ದು ಮೂಢನಂಬಿಕೆ ವೃದ್ಧಿಸುತ್ತಿದೆ. ಯುವಜನತೆ ವೈಜ್ಞಾನಿಕ ಮನೋಧರ್ಮದ ಕಡೆಗೆ ಗಮನಹರಿಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.

ಅವರು ವಿವೇಕಾನಂದ ಪದವಿ ಕಾಲೇಜಿನ ಐಕ್ಯುಎಸಿ ಮತ್ತು ಎನ್‌ಎಸ್‌ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಸಾರಡ್ಕ ಸಮೀಪದ ಮೂಡಂಬೈಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಶನಿವಾಋ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ದೇಶದ ಪರಂಪರೆ ವೈಜ್ಞಾನಿಕವಾಗಿ ಬಂದಿರುವಂತಹದ್ದು. ಯುವಜನತೆ ಇಂದು ವಿದೇಶಿ ಸಂಸ್ಕೃತಿಗಳತ್ತ ಗಮನಹರಿಸುತ್ತಿದೆ. ಹಿರಿಯರ ಬಲವಾದ ನಂಬಿಕೆಗಳನ್ನು ಒಪ್ಪಿಕೊಂಡರೂ ಪ್ರಶ್ನಿಸಬೇಕು. ಅಗತ್ಯವಿಲ್ಲದ ವಿಚಾರಗಳನ್ನು ದೂರ ಮಾಡುತ್ತಾ ಬರಬೇಕು. ಈ ನಡುವೆ ವಿದೇಶಿ ವಿಜ್ಞಾನಿಗಳು ಹೇಳಿದ್ದು ಮಾತ್ರ ಸತ್ಯ ಎಂಬ ನಂಬಿಕೆ ನಮ್ಮಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಹೊರಬಂದು ಭಾರತೀಯ ವೈಜ್ಞಾನಿಕ ಪರಂಪರೆಯೂ ಶ್ರೇಷ್ಟವಾದದ್ದೆಂಬುದನ್ನು ಅರಿಯಬೇಕು. ಯುವಜನತೆ ವೈಜ್ಞಾನಿಕ ಮನೋಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡು ಬದುಕಿದರೆ ಹೊಸದೊಂದು ಜಗತ್ತನ್ನು ಕಾಣಬಹುದಾಗಿದೆ. ಹಾಗೆಯೇ ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಿದ್ಯಾರ್ಥಿಗಳಿಗೆ ಶ್ರಮದ ಬದುಕಿನ ಪರಿಚಯದ ಉದ್ದೇಶದಿಂದ ಇಂತಹ ಶಿಬಿರವನ್ನು ಆಯೋಜಿಸಲಾಗುತ್ತಿದೆ. ವಿದ್ಯಾಭ್ಯಾಸದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬಿಳಿ ಪಟ್ಟಿಯ ಉದ್ಯೋಗ ಸಿಗಬೇಕು ಎಂಬ ಭಾವನೆ ಇರುತ್ತದೆ. ಇಂತಹ ಕೆಲಸಗಳು ಸಿಗದೇ ಇದ್ದಾಗ ಕುಗ್ಗಿ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಸಹಾಯಕ್ಕೆ ಬರುವುದು ಶ್ರಮದ ಕೆಲಸ. ಶ್ರಮದ ಬದುಕಿನ ಮೂಲಕ ನಾವಿಂದು ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂಬುದನ್ನು ಅರಿಯಬೇಕು ಎಂದು ನುಡಿದರು.

ಶಿಬಿರದಲ್ಲಿ ಕಲಿತಂತಹ ಸಹಭಾಗಿತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರಮದ ಬದುಕಿನ ಮೂಲಕ ಜೀವನ ಸಾಗಿಸುವ ಅನುಭವವನ್ನು ಶಿಬಿರದ ಮೂಲಕ ಪಡೆಯಲು ಸಾಧ್ಯ. ನಮ್ಮ ಸಂಬಂಧಗಳಿಗೆ ಜೀವ ತುಂಬಿಸುವ ರೀತಿಯಲ್ಲಿ ಜೀವನ ಸಾಗಿಸಬೇಕು. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲನ್ನು ಪಾಠ ಎಂದು ಪರಿಗಣಿಸಿಕೊಂಡು ಹೋಗಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಮಾತನಾಡಿ ಶಿಬಿರದಲ್ಲಿ ಕಲಿತಂತಹ ಅನುಭವಗಳನ್ನು ಮನನ ಮಾಡಿಕೊಳ್ಳಬೇಕು. ಆಗ ಶಿಕ್ಷಣ ಮುಗಿದೊಡನೆ ಉದ್ಯೋಗ ಲಭಿಸಿಲ್ಲ ಎಂದು ಕುಗ್ಗಬೇಕಾದ ಅವಶ್ಯಕತೆ ಬರುವುದಿಲ್ಲ. ಶಿಬಿರದಲ್ಲಿ ಕಲಿತಂತಹ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಮಕ್ಕಳು ಹೆತ್ತವರ ಅತಿಯಾದ ಕಾಳಜಿಯಲ್ಲಿ ಬೆಳೆಯುತ್ತಿದ್ದಾರೆ. ಸಾರ್ವಜನಿಕ ಸಂಪರ್ಕಕ್ಕೆ ಬಂದಾಗ ವಿದ್ಯಾರ್ಥಿಗಳ ಬೆಳವಣಿಗೆ ಕಡಿಮೆಯಾಗುತ್ತಿದೆ.

ನಿತ್ಯಜೀವನದಲ್ಲಿ ಎದುರಾಗುವಂತಹ ಕಷ್ಟಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡಾಗ ಬದುಕನ್ನು ಸುಂದರವಾಗಿ ರೂಪಿಸಲು ಸಾಧ್ಯ. ನಮ್ಮದು ಕೃಷಿಯಾಧಾರಿತವಾದ ದೇಶವಾದ್ದರಿಂದ ಶಾರೀರಿಕವಾದ ಜೀವನ ನಡೆಸಬೇಕು. ವಿದ್ಯಾರ್ಥಿಗಳಿಗೆ ಸರ್ವತೋಮುಖ ವಿಚಾರಗಳನ್ನು ತಿಳಿಸುವ ಕೆಲಸ ಶಿಬಿರದಿಂದ ಆಗುತ್ತಿದೆ ಎಂದರು.

ಮೂಡಂಬೈಲು ಶಾಲೆಯ ಮುಖ್ಯೋಪಾದ್ಯಾಯ ಅರವಿಂದ ಕುಡ್ಲ ಮಾತನಾಡಿ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಅನುಭವ ಎಂದು ತಿಳಿದುಕೊಳ್ಳಬೇಕು ಎಂದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್‌ಎಂ.ಟಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀನಾಥ್ ಬಿ ಸ್ವಾಗತಿಸಿ, ಪ್ರಸ್ತಾವಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅನಿತಾಕಾಮತ್ ವಂದಿಸಿದರು. ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್.ನಿಡ್ಪಳ್ಳಿ ಕರ‍್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶ್ರಾವ್ಯ ಪಿ, ಧನ್ಯಶ್ರೀ ಡಿ.ವಿ, ಶೀತಲಾ ಎ ಪ್ರಾರ್ಥಿಸಿದರು.