Saturday, September 21, 2024
ಸುದ್ದಿ

ಲೋಕಾರ್ಪಣೆಗೆ ಸಿದ್ಧವಾಗಿದೆ ದೇಶದ ಅತಿ ಉದ್ದದ ಸೇತುವೆ – ಕಹಳೆ ನ್ಯೂಸ್

ಅಸ್ಸಾಂ ಹಾಗೂ ಅರುಣಾಚಲ ಪ್ರದೇಶವವನ್ನು ಸಂಪರ್ಕಿಸುವ ದೇಶದ ಅತಿ ಉದ್ದದ ರಸ್ತೆ ಹಾಗೂ ರೈಲು ಮಾರ್ಗ ಹೊಂದಿರುವ ಬ್ರಿಡ್ಜ್ ಲೋಕಾರ್ಪಣೆಗೆ ಸಿದ್ಧವಾಗಿದೆ. ಅಸ್ಸಾಂನ ದಿಬ್ರುಘರ್ ಮತ್ತು ಅರುಣಾಚಲ ಪ್ರದೇಶದ ಪಸಿಘಾಟ್ ಸಂಪರ್ಕಿಸುವ ಈ ಸೇತುವೆಯನ್ನು ನಾಳೆ ಅಂದರೆ ಕ್ರಿಸ್ಮಸ್ ಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಬ್ರಿಡ್ಜ್, 4.94 ಕಿಲೋ ಮೀಟರ್ ಉದ್ದವಿದೆ. ಈ ಯೋಜನೆಗೆ 1997 ರ ಜನವರಿ 22 ರಂದು ಅಂದಿನ ಪ್ರಧಾನಿ ಹೆಚ್.ಡಿ.ದೇವೇಗೌಡ ಶಿಲಾನ್ಯಾಸ ಮಾಡಿದ್ದರು. 2002 ರ ಏಪ್ರಿಲ್ 21 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ, ಕಾಮಗಾರಿ ಆರಂಭವಾಗಿತ್ತು. ಆದರೆ ಕಾಮಗಾರಿಯಲ್ಲಿ ಭಾರೀ ವಿಳಂಬವಾಗಿದ್ದರಿಂದ ಅದರ ವೆಚ್ಚವೂ ಹೆಚ್ಚೂ ಕಡಿಮೆ ದುಪ್ಪಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರಂಭದಲ್ಲಿ 3,230 ಕೋಟಿ ರೂಪಾಯಿ ಅಂದಾಜು ಮಾಡಲಾಗಿದ್ದರೂ ಆಮೆಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ 5,960 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಬ್ರಹ್ಮಪುತ್ರ ನದಿ ಮೇಲೆ ಕಟ್ಟಿರುವ ಬೋಗಿಬೀಲ್ ಸೇತುವೆ ಮೊದಲು 4.31 ಕಿಲೋಮೀಟರ್ ಉದ್ದ ನಿರ್ಮಿಸಲು ಯೋಜಿಸಲಾಗಿತ್ತು. ಇದರಲ್ಲೂ ಬದಲಾವಣೆ ಮಾಡಿ, ಒಟ್ಟು 4.91 ಕಿಲೋಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿದೆ.

ಜಾಹೀರಾತು

ಡಿಸೆಂಬರ್ 25 ರಂದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾಗಿದ್ದು, ಅಂದೇ, ಸೇತುವೆ ಲೋಕಾರ್ಪಣೆಯಾಗಲಿದೆ. ಈವರೆಗೆ ಮುಂಬೈನಲ್ಲಿರುವ ಸೇತುವೆಯೇ (3.55 ಕಿ. ಮೀ.) ದೇಶದ ಅತಿ ಉದ್ದದ ಬ್ರಿಡ್ಜ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಈಗ ಅಸ್ಸಾಂನಲ್ಲಿ ನಿರ್ಮಿಸಿರುವ ಸೇತುವೆ ಮುಂಬೈನ ಬ್ರಿಡ್ಜ್ಗಿಂತ ಉದ್ದವಿದ್ದು, ಹೊಸ ದಾಖಲೆ ಬರೆಯಲಿದೆ.