ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ದೂರಿಯಾಗಿ ಆರಂಭವಾದ ಕರಾವಳಿ ಉತ್ಸವ ನೋಡಲು ಬರುವವರಿಗೆ ನಿರಾಸೆ ಮೂಡುವಂತಹ ಸ್ಥಿತಿ ಕರಾವಳಿ ಉತ್ಸವದ ವಸ್ತು ಪ್ರದರ್ಶನದಲ್ಲಿ ಎದ್ದು ಕಾಣುತ್ತಿದ್ದು, ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ.
ಕರಾವಳಿ ಉತ್ಸವ ಎಂದರೆ ಕರಾವಳಿ ಜನರು ಹೆಚ್ಚಾಗಿ ಬರುವುದು ವಸ್ತು ಪ್ರದರ್ಶನ ವೀಕ್ಷಿಸಲು. ಕರಾವಳಿ ಉತ್ಸವದ ಉದ್ಘಾಟನೆ ದಿನ ಅದ್ದೂರಿಯಾಗಿ ಕರಾವಳಿ ಉತ್ಸವದ ಮೆರವಣಿಗೆ ನಡೆದ ಬಳಿಕ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಹಾಗೂ ಮಂಗಳಾ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಂಗಳಾ ಕ್ರೀಡಾಂಗಣದಲ್ಲಿ ವಸ್ತು ಪ್ರದರ್ಶನ ನಡೆಯುವುದು ಸಾಮಾನ್ಯ. ವಸ್ತು ಪ್ರದರ್ಶನ ನೋಡಲು ಸಾವಿರಾರು ಜನರು ಬಂದು , ತಮಗಿಷ್ಟವಾದ ವಸ್ತುಗಳನ್ನು ಖರೀದಿಸುವುದು ಮಾತ್ರವಲ್ಲದೆ, ಆಟವಾಡಿ ಸಂಭ್ರಮಿಸುವುದು ನಡೆಯುತ್ತದೆ.
ಆದರೆ ಈ ಬಾರಿ ಕರಾವಳಿ ಉತ್ಸವದ ವಸ್ತು ಪ್ರದರ್ಶನ ವೀಕ್ಷಿಸಲು ಹೋದವರಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ವಸ್ತು ಪ್ರದರ್ಶನದ ಒಳಹೊಕ್ಕರೆ ಹೆಚ್ಚಿನ ಮಳಿಗೆಗಳು ಖಾಲಿ ಖಾಲಿಯಾಗಿದೆ. ವಸ್ತು ಪ್ರದರ್ಶನದಲ್ಲಿ ಕೆಲವೆ ಮಳಿಗೆಗಳು ಆರಂಭವಾಗಿದ್ದು ಖಾಲಿ ಬಿದ್ದ ಮಳಿಗೆಗಳು ಜನರಲ್ಲಿ ನಿರಾಶೆ ಮೂಡಿಸಿದೆ.
ಮಕ್ಕಳಿಗೆ ಆಟವಾಡಲು ಬೇಕಾದ ವ್ಯವಸ್ಥೆಗಳು ಇದ್ದರೂ ಅದು ಕೂಡ ಬಿಕೋ ಎನ್ನುತ್ತಿದೆ. ವಸ್ತು ಪ್ರದರ್ಶನದ ಮಳಿಗೆ ಆರಂಭವಾಗದೆ ಜನರು ವಸ್ತು ಪ್ರದರ್ಶನದತ್ತ ಬರುತ್ತಿಲ್ಲ. ಸಾಮಾನ್ಯವಾಗಿ ಕರಾವಳಿ ಉತ್ಸವದ ವಸ್ತು ಪ್ರದರ್ಶನ ಗಿಜಿಗುಡುತ್ತದೆ. ಅದರಲ್ಲಿಯೂ ಇದೀಗ ರಜೆಯ ಸಂದರ್ಭ.ಆದರೂ ಒಂದೆಡೆ ಜನ ಬರುತ್ತಿಲ್ಲ, ಮತ್ತೊಂದೆಡೆ ಮಳಿಗೆಗಳು ಆರಂಭವಾಗದೆ ಜನರು ಮನೋರಂಜನೆ ಪಡೆಯಲು ಅಸಾಧ್ಯವಾಗಿದೆ.
ಒಟ್ಟಿನಲ್ಲಿ ಜನರ ಉತ್ಸಾಹ ಹೆಚ್ಚಿಸಬೇಕಾದ ಕರಾವಳಿ ಉತ್ಸವ ಸಪ್ಪೆಯಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.