ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೈ ಪಾಳಯದಲ್ಲಿ ಮನಸ್ತಾಪದ ಹುತ್ತ ಬೆಳೆಯತೊಡಗಿದೆ. ನೂತನ ಸಚಿವರಿಗೆ ಖಾತೆ ಹಂಚುವ ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಮುಖ ನಾಯಕರಾದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ಕಗ್ಗಂಟಾಗಿ ಪರಿಣಮಿಸಿದೆ.
ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರು ತಮ್ಮ ಬಳಿ ಇರುವ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ನೇರವಾಗಿ ನಿರಾಕರಿಸಿದ ಹಿನ್ನಲೆಯಲ್ಲಿ ಖಾತೆ-ತ್ಯಾತೆ ಪರಿಹರಿಸಲು ಮಧ್ಯಸ್ಥಿಕೆ ವಹಿಸಿದ್ದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮಾಡಿದ ಪ್ರಯತ್ನಗಳು ವಿಫಲಗೊಂಡಿವೆ.
ಖಾತೆ-ಕ್ಯಾತೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಿನ್ನೆಯಷ್ಟೇ ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ನಡೆದಿತ್ತು. ರಾಜ್ಯ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದಿದೆ. ಹೀಗಾಗಿ ಕ್ಯಾತೆಗೆ ಪರಿಹಾರ ದೊರೆಯದೇ ಈ ವಿಚಾರ ರಾಹುಲ್ ಅಂಗಳ ತಲುಪಿದೆ.
ಈ ನಡುವೆ ಒಂದು ಹಂತದಲ್ಲಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗುತ್ತಿದೆ. ಅಂತಿಮವಾಗಿ ಪ್ರಮುಖ ಖಾತೆಗಳನ್ನು ಹಿಂಪಡೆಯಬೇಕೋ ಅಥವಾ ಹಾಲಿ ಪ್ರಭಾವ ಸಚಿವರಲ್ಲೇ ಸದರಿ ಖಾತೆಗಳನ್ನು ಮುಂದುವರೆಸಬೇಕೋ ಎಂಬ ಬಗ್ಗೆ ರಾಹುಲ್ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದು ಸಭೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.