ಪುತ್ತೂರು: ಪ್ರಕೃತಿಯನ್ನು ನಾಶ ಮಾಡುತ್ತಿರುವ ಪರಿಣಾಮ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಹಾಗೆಯೇ ಪ್ರಕೃತಿಗೆ ವಿರುದ್ಧವಾಗಿ ಹೋದರೆ ಮಾರಕವಾದ ರೋಗಗಳು ಬರುತ್ತವೆ ಎಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಕುಮಾರ್ ಎಂ.ಕೆ ಹೇಳಿದರು.
ಅವರು ಕಾಲೇಜಿನ ಐಕ್ಯುಎಸಿ ಸಹಯೋಗದಲ್ಲಿ ಎನ್‌ಎಸ್‌ಎಸ್ ಘಟಕವು ಸಾರಡ್ಕ ಸಮೀಪದ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಪ್ರಕೃತಿ ಮತ್ತು ಬದುಕು ಎಂಬ ವಿಷಯದ ಕುರಿತು ಸೋಮವಾರ ಉಪನ್ಯಾಸ ನೀಡಿದರು.
ನಾವಿಂದು ಪ್ರಾಕೃತಿಕವಾದ ಜೀವನದಿಂದ ಯಾಂತ್ರೀಕೃತವಾದ ಜೀವನದತ್ತ ಹೋಗುತ್ತಿದ್ದೇವೆ. ನೈಸರ್ಗಿಕ ಸಂಗತಿಗಳಿಗೆ ವಿರೋಧವೆನಿಸುವ ಶಿಕ್ಷಣ, ಆಹಾರ, ಆರೋಗ್ಯ ಇಂದು ಬಹುದೊಡ್ಡ ಉದ್ಯಮವಾಗಿ ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ. ಪ್ರಕೃತಿಯಲ್ಲಿ ಸಿಗುತ್ತಿದ್ದ ನೈಸರ್ಗಿಕ ಸಂಪತ್ತುಗಳು ವಿಷವಾಗಿ ಮಾರ್ಪಾಡಾಗುತ್ತಿರುವುದು ದುರಂತ. ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವ ಜಲಪ್ರಳಯಕ್ಕೆ ಮಾನವನೇ ನೇರ ಹೊಣೆ. ದ.ಕ.ಜಿಲ್ಲೆಗೂ ಪ್ರವಾಹ ವ್ಯಾಪಿಸುವ ದಿನಗಳು ಬಹುದೂರವಿಲ್ಲ. ಅತಿಯಾದ ಜಾಗತಿಕ ತಾಪಮಾನದಿಂದ ಸಮುದ್ರದ ವ್ಯಾಪ್ತಿ ದೊಡ್ಡದಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದು ನೈಸರ್ಗಿಕವಾದ ಕಾಡಿನ ಬದಲು ಕಾಂಕ್ರೀಟ್ ಕಾಡುಗಳು ಹೆಚ್ಚಾಗುತ್ತಿರುವುದು ದುರಂತ. ಮರಗಳ ನಾಶದಿಂದ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ. ಶುದ್ಧವಾದ ನೀರು, ನೀರು, ಗಾಳಿ ಇದ್ದರೆ ಮಾತ್ರ ದೀರ್ಘಕಾಲ ಬದುಕಬಹುದು. ಮೂಢನಂಬಿಕೆಗಳನ್ನು ಬದಿಗಿರಿಸಿ ಅತಿ ಹೆಚ್ಚು ಗಾಳಿ ಒದಗಿಸುವ ಅಶ್ವಥ ಗಿಡಗಳನ್ನು ಬೆಳೆಸುವ ಕೆಲಸ ಆಗಬೇಕಿದೆ. ಮುಂದಿನ ಜನಾಂಗ ಬದುಕಬೇಕಿದ್ದರೆ ನೈಸರ್ಗಿಕವಾದ ಪ್ರಕೃತಿ ಅಗತ್ಯ. ಪ್ರಕೃತಿಯನ್ನು ಮರೆತಾಗ ಬದುಕು ಬರಡಾಗುತ್ತದೆ. ಪ್ರಕೃತಿ ಮತ್ತು ಬದುಕು ಎರಡು ನಾಣ್ಯದ ಮುಖಗಳಿದ್ದಂತೆ. ಪ್ರಕೃತಿಯ ಸಂಪತ್ತನ್ನು ದುರ್ಬಳಕೆ ಮಾಡದೆ ಉಳಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಮೂಡಂಬೈಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಂಜೀವ ಬಂಟ ಮಾತನಾಡಿ ಪ್ರಕೃತಿ ಇದ್ದರೆ ಮಾತ್ರ ಬದುಕು ಹಸನಾಗುತ್ತದೆ. ಆದರೆ ನಾವಿಂದು ಪ್ರಕೃತಿಯನ್ನು ವಿಕೃತಿಯಾಗಿ ಮಾಡಿ ಬದುಕುತ್ತಿದ್ದೇವೆ. ನಗರದ ವಾತಾವರಣ ಹಳ್ಳಿಯಲ್ಲಿ ಸೃಷ್ಟಿಯಾಗುತ್ತಿರುವುದು ದುರಂತ. ಗಣಿಗಾರಿಕೆಗಳು ಇಂದು ಪ್ರತಿಯೊಂದು ಹಳ್ಳಿಯನ್ನು ಆವರಿಸಿಕೊಂಡುಬಿಟ್ಟಿವೆ. ನೈಸರ್ಗಿಕವಾದ ಸಂಪತ್ತನ್ನು ಉಳಿಸಿ ಬೆಳೆಸುವುದರತ್ತ ಯುವಜನತೆ ಗಮನ ಕೊಡಬೇಕು ಎಂದು ಹೇಳಿದರು.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡಂಬೈಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ರಮೇಶ್ ಪೂಜಾರಿ ಬಳಂತಿಮುಗೇರು ಮಾತನಾಡಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕಿದ್ದರೆ ಪ್ರಕೃತಿ ಅತಿ ಅಗತ್ಯ ಎಂದು ಹೇಳಿದರು.
ವಿದ್ಯಾರ್ಥಿನಿಯರಾದ ಶೀತಲ, ಮಧುಶ್ರೀ, ಗೀತಾ ಹೊಸಳಿಕೆ ಪ್ರಾರ್ಥಿಸಿದರು. ವಿದ್ಯಾರ್ಥಿ ಕಾರ್ತಿಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ಹರ್ಷಿತ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಾ ಕರ‍್ಯಕ್ರಮ ನಿರೂಪಿಸಿದರು.