ಮಂಗಳೂರು: ಮದುವೆ ಎಂದಾಕ್ಷಣ ವಧು-ವರರಿಗೆ ಉಡುಗೊರೆ ಕೊಡುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆ ಜೋಡಿ ‘೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಮತದಾನ ಮಾಡುವುದೇ ನೀವು ನೀಡುವ ಉಡುಗೊರೆ’ ಎಂದು ಲಗ್ನಪತ್ರಿಕೆ ಮೂಲಕ ಮನವಿ ಮಾಡಿ ಮೋದಿ ಅಭಿಮಾನ ಮೆರೆದಿದ್ದಾರೆ.
ಮಂಗಳೂರಿನ ಅತ್ತಾವರ ನಿವಾಸಿ ನಿಹಾಲ್ ಎ.ಕುಮಾರ್ ಮತ್ತು ಬಲ್ಮಠ ನಿವಾಸಿ ಅಂಕಿತಾರ ವಿವಾಹ ೨೦೧೯ರ ಫೆಬ್ರವರಿ ೧೦ ರಂದು ನಡೆಯಲಿದೆ. ಇವರು ಮೋದಿಯವರಿಗೆ ಮತ ನೀಡುವುದೇ ನಮಗೆ ನೀಡುವ ಉಡುಗೊರೆ ಎಂದು ಲಗ್ನಪತ್ರಿಕೆಯಲ್ಲಿ ವಿನಂತಿ ಮಾಡಿದ್ದಾರೆ.
ಈ ವಿಶಿಷ್ಟವಾದ ಆಲೋಚನೆ ಬಂದದ್ದು ಮದುಮಗ ನಿಹಾಲ್ ತಂದೆ ಅನಿಲ್ ಕುಮಾರ್ ಅತ್ತಾವರ ಅವರಿಗೆ. ಈ ಬಗ್ಗೆ ಅವರು ಮನೆಯವರಲ್ಲಿ ಮಾತನಾಡಿ, ಮೋದಿಯವರಿಗೆ ಮತದಾನ ಮಾಡುವ ಉಡುಗೊರೆಯ ವಿನಂತಿಯನ್ನು ಬಂಧು-ಬಳಗ, ಗೆಳೆಯರಲ್ಲಿ ಮಾಡಿದ್ದಾರೆ. ಅನಿಲ್ ಕುಮಾರ್ ಅತ್ತಾವರ ಅವರು ಸ್ವಂತ ಉದ್ಯಮದಲ್ಲಿ ತೊಡಗಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಅವರು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಬೇಕೆಂಬುವುದು ನನ್ನ ಅಭಿಲಾಷೆ. ಅದಕ್ಕಾಗಿ ಉಡುಗೊರೆಯ ಪರವಾಗಿ ಮೋದಿಯವರಿಗೆ ಮತ ಹಾಕುವಂತೆ ನಮ್ಮ ಬಂಧು ಮಿತ್ರರಲ್ಲಿ ವಿನಂತಿಸಿಕೊಂಡಿದ್ದೇವೆ.
ದೇಶ ಈಗ ಮೋದಿಯವರ ಆಡಳಿತದಲ್ಲಿ ಆರ್ಥಿಕ ಸ್ಥಿತಿಯಿಂದಲೂ, ಭದ್ರತೆಯ ದೃಷ್ಟಿಯಿಂದಲೂ ಸುಭದ್ರವಾಗಿ ಮುಂದುವರಿಯುತ್ತದೆ. ಆದ್ದರಿಂದ ಮತ್ಯಾರೋ ಬಂದು ಹಾಳುಗೆಡವುದಕ್ಕಿಂತ ಮೋದಿಯವರೇ ಮತ್ತೆ ಇದೇ ಸ್ಥಿತಿಯನ್ನು ಮುಂದುವರಿಸಲಿ ನನ್ನ ಆಸೆ ಎಂದು ಹೇಳಿದರು.
ಮದುಮಗ ನಿಹಾಲ್ ಎ. ಕುಮಾರ್ ಮಾತನಾಡಿ, ಮದುವೆ ಆಮಂತ್ರಣ ಪತ್ರಿಕೆ ಮಾಡುವ ಸಂದರ್ಭ ಈ ರೀತಿ ಒಂದು ಪ್ರಯತ್ನ ಮಾಡುವ ಎಂದು ನನ್ನ ತಂದೆ ಕೇಳಿದಾಗ, ನನಗೂ ಒಪ್ಪಿಗೆಯಾಯಿತು. ನನಗೂ ಮತ್ತೊಮ್ಮೆ ಮೋದಿಯವರೇ ಪ್ರಧಾನಿಯಾಗಬೇಕೆಂದು ಆಸೆ ಇದೆ. ಆ ಕಾರಣದಿಂದ ಲಗ್ನಪತ್ರಿಕೆಯನ್ನು ಕೊಡಲು ಹೋದಾಗ ನಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಮೋದಿಯವರಿಗೇ ಮತದಾನ ಮಾಡಿ ಎಂದು ವಿನಂತಿ ಮಾಡುತ್ತೇನೆ ಎಂದು ಹೇಳಿದ್ದಾರೆ.