ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರಿಗೆ ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಕಾಂಗ್ರೆಸಿನ ಅತ್ಯುನ್ನತ ನಾಯಕರಲ್ಲೊಬ್ಬರಾಗಿದ್ದ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸಿನ ಬೆಳವಣಿಗೆಗಳಿಂದ ಬೇಸತ್ತು ಪಕ್ಷ ತೊರೆದು ಬಿಜೆಪಿ ಸೇರಿದರು. ಆನಂತರ ಕಾಂಗ್ರೆಸ್ ನಾಯಕರು ಎಸ್.ಎಂ.ಕೃಷ್ಣ ಅವರಿಂದ ಅಂತರ ಕಾಯ್ದುಕೊಂಡಿದ್ದರು.
ಒಂದು ಕಾಲಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ಎಸ್.ಎಂ.ಕೃಷ್ಣ ಅವರು ರಾಜಕೀಯ ಗುರುವಾಗಿದ್ದರು. ಇಂದು ತಮ್ಮ ರಾಜಕೀಯ ಗುರು ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಬೇಸಿಗೆ ಹಂಗಾಮಿ ಬೆಳೆಗೆ ನಾಳೆಯಿಂದ ನೀರು : ಬೆಂಗಳೂರು, ಜ.೧-ಬೇಸಿಗೆ ಹಂಗಾಮಿನ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ಭದ್ರಾ ಜಲಾಶಯದಿಂದ ನಾಳೆಯಿಂದ ನೀರು ಹರಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಬೇಸಿಗೆ ಬೆಳೆಗಳನ್ನು ಬೆಳೆಯಲು ಹಾಗೂ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ಲಕ್ಕವಳ್ಳಿಯ ಭದ್ರಾ ಅಣೆಕಟ್ಟಿನಿಂದ ಭದ್ರಾ ಬಲ ಮತ್ತು ಎಡ ದಂಡೆ ನಾಲೆಗಳಿಗೆ ನೀರು ಹರಿಸಲು ಸೂಚಿಸಿದ್ದಾರೆ.
ರೈತರ ಬೆಳೆಗಳಿಗೆ ನೀರು ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಇಲಾಖಾ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದು ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಯಾವುದೇ ಕಾರಣಕ್ಕೂ ರೈತರ ಬೆಳೆ ಹಾನಿಗೀಡಾಗದಂತೆ ಹಾಗೂ ರೈತರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ರೈತರ ಹಿತದೃಷ್ಠಿಯಿಂದ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.