ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕರ ಮೆನಗಳ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದಾರೆ. ಇದೇ ವೇಳೆ ನಟರ ಅಭಿಮಾನಿಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ಯಶ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ನಿವಾಸಗಳಿಗೆ ದಾಳಿ ಮಾಡಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ನಿವಾಸ ಸೇರಿದಂತೆ ಸುಮಾರು ೬೦ ಕಡೆ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಟರ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನೆಚ್ಚಿನ ನಟರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿಸಿದ್ದೀರಿ. ಕರ್ನಾಟಕವನ್ನೇ ಹಾಟ್ ಸ್ಪಾಟ್ ಮಾಡಿಕೊಂಡಿದ್ದೀರಿ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಈ ದಾಳಿಯ ಎಫೆಕ್ಟ್ ಮೋದಿ ಮೇಲಾಗಲಿದೆ. ಚುನಾವಣೆಯಲ್ಲಿ ನಿಮ್ಮನ್ನು ಟಾರ್ಗೆಟ್ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಸುಮಾರು ಎಂಟು ಗಂಟೆ ಸುಮಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ದಾಳಿ ನಡೆಸಿದ ಬಳಿಕ ಐಟಿ ಅಧಿಕಾರಿಗಳು ಶಿವಣ್ಣ ಅವರನ್ನು ಅವರನ್ನು ಹಲವು ಪ್ರಶ್ನೆ ಕೇಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಹಿಂದಿನ ಚಿತ್ರದ ಸಂಭಾವನೆ ಎಷ್ಟು? ಎಷ್ಟು ಸಂಭಾವನೆ ಪಡೆದುಕೊಂಡಿದ್ದೀರಿ? ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ನೀಡುವಂತೆ ಅಧಿಕಾರಿಗಳು ಶಿವಣ್ಣನಿಗೆ ಸೂಚಿಸಿದ್ದಾರೆ ಅಂತ ಹೇಳಲಾಗಿದೆ.
ಇನ್ನು ಶಿವಣ್ಣನವರ ಬಹುತೇಕ ವ್ಯವಹಾರಗಳನ್ನು ನೋಡಿಕೊಳ್ಳುವ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಇಬ್ಬರು ಮಹಿಳಾ ಅಧಿಕಾರಿಗಳು ಹಣಕಾಸು ವಿಷಯಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.