Sunday, November 24, 2024
ಸುದ್ದಿ

ಚಂ’ಧನ’ವನದಲ್ಲಿ ಇಂದೂ ಐಟಿ ತಲಾಶ್, ಯಾರ ಮನೆಯಲ್ಲಿ ಏನೇನು ಸಿಕ್ಕಿದೆ..? – ಕಹಳೆ ನ್ಯೂಸ್

ಬೆಂಗಳೂರು: ಕನ್ನಡ ಚಿತ್ರರಂಗದ ನಟರು, ನಿರ್ಮಾಪಕರು, ವಿತರಕರ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದೂ ಕೂಡ ದಾಳಿ ಮುಂದುವರೆಸಿದ್ದಾರೆ.

ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜುಕುಮಾರ್, ಯಶ್, ಸುದೀಪ್, ನಿರ್ಮಾಪಕರಾದ ರಾಕಲೈನ್ ವೆಂಕಟೇಶ್, ಸಿ.ಆರ್.ಮನೋಹರ್, ವಿಜಯ್ ಕಿರಗಂದೂರು ಮತ್ತು ವಿತರಕ ಜಯಣ್ಣ ನಿವಾಸದಲ್ಲಿ ಐಟಿ ಅಧಿಕಾರಿಗಳು ಮತ್ತೆ ಇಂದು ಬೆಳಗ್ಗಿನಿಂದಲೇ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುನೀತ್ ರಾಜ್‍ಕುಮಾರ್ ನಿವಾಸದ ಮೇಲೆ ನಿನ್ನೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ತಡರಾತ್ರಿಯವರೆಗೆ ಆಸ್ತಿ ಸಂಬಂಧಿತ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದರು. ಆದರೆ ಇನ್ನೂ ಕೆಲವು ದಾಖಲಾತಿಗಳ ಪರಿಶೀಲನೆ ಬಾಕಿ ಉಳಿದ ಕಾರಣ ನಾಲ್ವರು ಅಧಿಕಾರಿಗಳು ಪುನೀತ್ ಅವರ ಮನೆಯಲ್ಲೇ ಬೀಡು ಬಿಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.ಇನ್ನು ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲೂ ಶೋಧ ಕಾರ್ಯ ಮುಂದುವರೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಮನೆಯವರು ಹೊರಗೆ ಹೋಗಲು ಅವಕಾಶವಿರುವುದಿಲ್ಲ. ಹಾಗಾಗಿ ಶಿವರಾಜ್ ಕುಮಾರ್ ದಂಪತಿ ಮಾನ್ಯತಾ ಟೆಕ್ ಪಾರ್ಕ್‍ನ ಮನೆಯ ಬಾಲ್ಕನಿ ಮೇಲೆಯೇ ಬೆಳಗಿನ ವಾಯು ವಿಹಾರ ನಡೆಸಿದರು.

ನಿನ್ನೆ ತಡರಾತ್ರಿಯವರೆಗೂ 8 ಮಂದಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿ ಐವರು ಅಧಿಕಾರಿಗಳು ವಾಪಸ್ಸಾಗಿದ್ದರು. ಮೂವರು ಶಿವರಾಜ್ ಕುಮಾರ್ ಅವರ ಮನೆಯಲ್ಲೇ ಬೀಡುಬಿಟ್ಟಿದ್ದು, ಇಂದು ಮತ್ತೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ನಟ ಯಶ್ ಅವರ ಹೊಸಕೆರೆಹಳ್ಳಿಯ ನಿವಾಸದಲ್ಲಿ ಮೂವರು ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ 20ಕೆಜಿ ಬೆಳ್ಳಿ, 450 ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ ಪತ್ತೆಯಾಗಿದ್ದು, ಇವೆಲ್ಲವನ್ನೂ ಯಶ್ ತಾಯಿಯವರ ಸಮ್ಮುಖದಲ್ಲೇ ಲೆಕ್ಕ ಹಾಕಲಾಗುತ್ತಿದೆ.

ಎಲ್ಲದಕ್ಕೂ ಅಧಿಕಾರಿಗಳು ಲೆಕ್ಕ ಕೇಳುತ್ತಿದ್ದು ಯಶ್ ತಾಯಿ ಸಹನೆಯಿಂದಲೇ ಉತ್ತರಿಸುತ್ತಿದ್ದಾರೆ. ಇನ್ನು ಯಶ್ 8 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಅದರಲ್ಲಿ 4 ಖಾತೆಗಳನ್ನು ತಾಯಿಯೊಂದಿಗೆ ಜಂಟಿಯಾಗಿ ತೆರದಿದ್ದಾರೆ. ಒಟ್ಟು 40 ಕೋಟಿ ರೂ. ಸಾಲ ಇದೆ. ಒಂದು ಬ್ಯಾಂಕಿನಲ್ಲಿ 13, ಮತ್ತೊಂದು ಬ್ಯಾಂಕಿನಲ್ಲಿ 17 ಕೊಟಿ ರೂ. ಸಾಲ ಇದೆ. ಅಷ್ಟೇ ಅಲ್ಲದೇ ಯಶ್ ಮಂಡ್ಯದಲ್ಲಿ ಜಮೀನು ಖರೀದಿಸಿರುವುದಾಗಿಯೂ ಯಶ್ ತಾಯಿ ಹೇಳಿದ್ದಾರೆ.

ಸುದೀಪ್ ಮನೆಯಲ್ಲೂ ಅಧಿಕಾರಿಗಳು ದಾಖಲೆ ಪತ್ರಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರ ಮಹಾಲಕ್ಷ್ಮೀ ಬಡಾವಣೆಯ ನಿವಾಸದಲ್ಲಿ 6 ಮಂದಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ನಿನ್ನೆ ಸಂಗ್ರಹಿಸಲಾದ ದಾಖಲೆ ಪತ್ರಗಳನ್ನು ಒಂದು ಕೊಠಡಿಯಲ್ಲಿ ಇರಿಸಿದ್ದು, ಇಂದು ಎರಡು ಕಪ್ಪು ಬಣ್ಣದ ಬ್ಯಾಗ್‍ನೊಂದಿಗೆ ತೆರಳಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಿ.ಆರ್.ಮನೋಹರ್, ವಿಜಯ ಕಿರಗಂದೂರ್, ಜಯಣ್ಣ ನಿವಾಸದಲ್ಲೂ ಶೋಧ ಕಾರ್ಯ ಮುಂದುವರೆದಿದೆ.