ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಿಸಲು ಮಾನವ ಸಂಪನ್ಮೂಲ ಸಚಿವಾಲಯ ಹೊಸ ಯೋಜನೆ ಜಾರಿಗೆ ಚಿಂತನೆ ನಡೆಸಿದೆ.
ಶಾಲಾ ಶಿಕ್ಷಣದ ಗುಣಮಟ್ಟ ತಿಳಿಯಲು ಪ್ರತಿ ರಾಜ್ಯದಲ್ಲಿಯೂ ಅಲ್ಲಿನ ಗುಣಮಟ್ಟದ ಮೌಲ್ಯಮಾಪನ ಪದ್ಧತಿಯನ್ನು ಜಾರಿಗೆ ತರಲು ಮುಂದಾಗಿದೆ.
1,000 ಅಂಕಗಳಿಗೆ ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕೆ ಒಟ್ಟು 70 ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಆಯಾ ರಾಜ್ಯಗಳು ಗಳಿಸುವ ಅಂಕಗಳಿಗೆ ಅನುಗುಣವಾಗಿ ನಿಗದಿತ ಶ್ರೇಣಿ ನೀಡಲಾಗುತ್ತದೆ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಈ ಮೌಲ್ಯಮಾಪನ ಪದ್ಧತಿಯಿಂದ ಆಯಾ ರಾಜ್ಯಗಳಲ್ಲಿನ ಶಿಕ್ಷಣದ ಗುಣಮಟ್ಟದ ಬಗ್ಗೆ ಸ್ಪಷ್ಟ ಚಿತ್ರಣ ದೊರಕುತ್ತದೆ. ಅದರ ಆಧಾರದಲ್ಲಿ ಅವುಗಳಲ್ಲಿನ ಗುಣಮಟ್ಟವನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ.
ಹಾಗೂ ಅಧಿಕ ಶ್ರೇಣಿ ಪಡೆದು ಸಾಧನೆ ಮಾಡಲು ರಾಜ್ಯಗಳ ನಡುವೆ ಸ್ಪರ್ಧಾತ್ಮಕ ಮನೋಭಾವ ಮೂಡಿಸಲು ಕೂಡ ಸಾಧ್ಯವಾಗುತ್ತದೆ ಎಂದಿದ್ದಾರೆ.