ಬೆಂಗಳೂರು: ಕೋಟ್ಯಾಂತರ ರೂ. ಖರ್ಚು ಮಾಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಗಳ ಮದುವೆ ಮಾಡಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಐಟಿ ಇಲಾಖೆಯಿಂದ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಜನಾರ್ದನ ರೆಡ್ಡಿ ಅವರು ೨೦೧೬ ರಲ್ಲಿ ನೂರಾರು ಕೋಟಿ ರೂ. ಖರ್ಚು ಮಾಡಿ ಮಗಳ ಮದುವೆ ಮಾಡಿದ್ದರು. ಈ ವೇಳೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ಮದುವೆಗೆ ಮಾಡಲಾದ ಖರ್ಚು ವೆಚ್ಚದ ಕುರಿತು ರೆಡ್ಡಿ ಅವರು ಐಟಿ ಇಲಾಖೆಗೆ ಸೂಕ್ತ ಮಾಹಿತಿ ಒದಗಿಸಿರಲಿಲ್ಲ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ಕೈಗೊಂಡಿರುವ ಐಟಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವ ಸಾಧ್ಯತೆ ಇದೆ.
ಅದ್ಧೂರಿ ಮದುವೆಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಮೇಲಿನ ತನಿಖೆ ಯಾವ ಹಂತದಲ್ಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಐಟಿ ಇಲಾಖೆ ಮಹಾ ನಿರ್ದೇಶಕ ಬಿ.ಆರ್. ಬಾಲಕೃಷ್ಣನ್, ಇಂತಹುದೇ ವ್ಯಕ್ತಿಯೆಂದು ನಿರ್ದಿಷ್ಟವಾಗಿ ಹೇಳುವುದಿಲ್ಲ.
ಆದರೆ, ನಾವು ಶೋಧ ಕಾರ್ಯ ನಡೆಸಿರುವ ಸಂದರ್ಭದಲ್ಲಿ ದೊರೆತ ಮಾಹಿತಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ, ಜೊತೆಗೆ ನ್ಯಾಯಲಯಕ್ಕೂ ಕೇಸ್ ದಾಖಲಿಸಿ ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಹೇಳಿದ್ದಾರೆ.