Thursday, January 23, 2025
ಸುದ್ದಿ

ಗಗನಕ್ಕೆ ಹಾರಿದ ಟೋಮೋಟೋ ಬೆಲೆ – ಕಹಳೆ ನ್ಯೂಸ್

ರಾಜ್ಯದಲ್ಲಿ ಕೊರೆಯುವ ಚಳಿ ಜನರ ಮೇಲೆ ಪರಿಣಾಮ ಬೀರುವ ಜತೆಗೆ ತರಕಾರಿ ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿದ್ದು, ಪ್ರತಿ ಕೆ.ಜಿಗೆ 70 ರು. ಮುಟ್ಟಿದೆ.

ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಚಳಿಯಿಂದ ಟೊಮೆಟೊ ಬೆಳೆಗೆ ಹೊಡೆತ ಬಿದ್ದಿದೆ. ಇಬ್ಬನಿ, ಶೀತಗಾಳಿಗೆ ಇಳುವರಿ ಶೇಕಡ ೪೦ರಷ್ಟು ಕುಂಠಿತಗೊಂಡಿದ್ದು, ಮಾರುಕಟ್ಟೆಗಳಿಗೆ ಈ ಹಿಂದಿನಷ್ಟು ಪೂರೈಕೆಯಾಗುತ್ತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆಯುತ್ತಿದ್ದು, ಚಳಿ ಹಾಗೂ ಇಬ್ಬನಿಗೆ ಗಿಡದಲ್ಲಿ ಕಾಯಿ ಕಟ್ಟುತ್ತಿಲ್ಲ. ಇದ್ದಷ್ಟು ಕಾಯಿ ಸಹ ಚಳಿಗೆ ಹಣ್ಣಾಗುತ್ತಿಲ್ಲ, ಬೆಳವಣಿಗೆಯೂ ಕಾಣುತ್ತಿಲ್ಲ. ಪರಿಣಾಮ ಮಾರುಕಟ್ಟೆಗೆ ಪೂ ರೈಕೆ ಕಡಿಮೆಯಾಗಿದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಈ ಹಿಂದೆ ಕೆ.ಜಿ.ಗೆ ೨೦ ಕ್ಕೆ ಮಾರಾಟಗೊಳ್ಳುತ್ತಿದ್ದ ಟೊಮೆಟೊ ಇದೀಗ ೬೦ ರಿಂದ ೭೦ ರು.ಮುಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಜೂನ್ ಹಾಗೂ ಜುಲೈ ಮಾಸದಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ ೧೫ ರಿಂದ ೨೫ ರು.ನೊಳಗೆ ಇರುತ್ತಿತ್ತು. ನಂತರದ ದಿನಗಳಲ್ಲಿ ಇನ್ನಷ್ಟು ಕುಸಿತ ಕಂಡಿದ್ದ ಟೊಮೆಟೊ ಕೆ.ಜಿ.ಗೆ ೮ ರಿಂದ ೧೦ ಕ್ಕೆ ಖರೀದಿಯಾಗಿತ್ತು. ಬೆಲೆ ಇಳಿಕೆ ಟೊಮೆಟೊ ಬೆಳೆದ ರೈತರು, ವ್ಯಾಪಾರಿಗಳನ್ನು ಸಂಕಷ್ಟಕ್ಕೀಡು ಮಾಡಿತ್ತು. ಡಿಸೆಂಬರ್‌ನ ಮೊದಲ ವಾರದಲ್ಲಿ ಕೆ.ಜಿ.ಗೆ ೧೭ ರಿಂದ ೨೦ ರು. ಏರಿಕೆ ಕಂಡ ಟೊಮೆಟೊ ೨೪ ರು.ಗೆ ಮಾರಾಟವಾಗಿತ್ತು.

ಹೊಸ ವರ್ಷದ ಪ್ರಾರಂಭದಲ್ಲಿ ಚೇತರಿಸಿಕೊಂಡ ಬೆಲೆ ೨೫ ರಿಂದ ೨೭ ರು.ಗೆ ಏರಿಕೆಯಾಗಿತ್ತು. ಜ.೫ರಿಂದ ಇಲ್ಲಿಯವರೆಗೆ ದಿನದಿಂದ ದಿನಕ್ಕೆ ದಾಖಲೆಯ ಬೆಲೆ ಗಿಟ್ಟಿಸಿಕೊಳ್ಳುತ್ತಿರುವ ಟೊಮೆಟೊ ಸದ್ಯ ಮಾರುಕಟ್ಟೆಗಳಲ್ಲಿ ೬೫ ರಿಂದ ೭೫ ರವರೆಗೆ ಬೆಲೆ ನಿಗದಿಯಾಗಿದೆ. ಬೆಂಗಳೂರಿನ ಕೇಂದ್ರ ಬಿಂದುವಾದ ಎಪಿಎಂಸಿ ಮಾರುಕಟ್ಟೆಗೆ ಪ್ರತಿದಿನ ಬರುತ್ತಿದ್ದ ಟೊಮೆಟೊ ಪ್ರಮಾಣದಲ್ಲಿ ಶೇ.೪೦ರಷ್ಟು ಕಡಿಮೆಯಾಗಿದೆ.

ಟೊಮೆಟೊ ಬೆಲೆ ೮೦೦ ರಿಂದ ೧೦೦೦ ರು. ದವರೆಗೆ ನಿಗದಿಯಾಗಿದೆ. ಸಗಟು ದರ ಕೆ.ಜಿ.ಗೆ ೫೦ ರಿಂದ ೫೫ ರು. ನಿಗದಿಯಾಗಿದ್ದು, ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆ.ಜಿ. ಟೊಮೆಟೊ ೬೦ ರಿಂದ ೭೦ ರು.ಗೆ ಖರೀದಿ ಯಾಗುತ್ತಿದೆ. ಶೀತಕ್ಕೆ ಇಳುವರಿ ಕಡಿಮೆಯಾಗಿದ್ದು, ಬೇಡಿಕೆ ಕುದುರಿದೆ. ಎಪಿಎಂಸಿಗೆ ಮಂಡ್ಯ, ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಮಾಗಡಿ ಸೇರಿದಂತೆ ಬೆಂಗಳೂರು ಸುತ್ತಮುತ್ತ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಟೊಮೆಟೊ ಸರಬರಾಜಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಟೊಮೆಟೊ ಇಳುವರಿ ಕುಂಠಿತವಾಗಿದೆ.

ತಮಿಳುನಾಡು, ನಾಸಿಕ್, ಮುಂಬೈಗೆ ಸಹ ಹೆಚ್ಚಿನ ಪ್ರಮಾಣದಲ್ಲಿ ಕಳುಹಿಸುತ್ತಿಲ್ಲ. ರಾಜ್ಯದಲ್ಲಿ ಬೆಳೆಯುತ್ತಿರುವ ಟೊಮೆಟೊ ಬೆಂಗಳೂರು ನಗರ ಹಾಗೂ ಇತರೆ ಸ್ಥಳೀಯ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತಿದೆ ಎನ್ನುತ್ತಾರೆ ಎಪಿಎಂಸಿ ವರ್ತಕ ಚಂದ್ರಶೇಖರ್.