ಪುತ್ತೂರು: ಕಾಲೇಜುಗಳ ಶೈಕ್ಷಣಿಕ ಮಟ್ಟವನ್ನು ಉನ್ನತೀಕರಿಸಲು ನ್ಯಾಕ್ ಸಂಸ್ಥೆ ಅಗತ್ಯ. ಸಂಸ್ಥೆಯ ಶೈಕ್ಷಣಿಕ ಸಾಧನೆಯನ್ನು ಹೆಚ್ಚಿಸುವುದಕ್ಕಾಗಿಯೇ ನ್ಯಾಕ್ ಸಂಸ್ಥೆ ರೂಪುಗೊಂಡಿದೆ. ಇದರಿಂದ ಶಿಕ್ಷಕರ ಗುಣಮಟ್ಟದಲ್ಲೂ ಉತ್ತಮ ಬದಲಾವಣೆ ಕಾಣಬಹುದಾಗಿದೆ.
ಆದರೆ ಕೆಲವು ಸಂಸ್ಥೆಗಳು ಇನ್ನೂ ನ್ಯಾಕ್ ಶ್ರೇಯಾಂಕ ಪಡೆಯದೇ ಇರುವುದರಿಂದ ಸ್ಥಳೀಯ ಹತ್ತು ಕಾಲೇಜುಗಳ ಮಾರ್ಗದರ್ಶನ ಕೇಂದ್ರವಾಗಿ ವಿವೇಕಾನಂದ ಕಾಲೇಜು ನ್ಯಾಕ್‌ನಿಂದ ನಿಯುಕ್ತಗೊಂಡಿದೆ ಎಂದು ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪೈ ಹೇಳಿದರು.
ಇವರು ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಈವರೆಗೆ ನ್ಯಾಕ್ ಸಂಸ್ಥೆಯ ಮಾನ್ಯತೆಯನ್ನು ಪಡೆಯದಿರುವ ಕಾಲೇಜುಗಳಿಗೆ ಮಾನ್ಯತೆಯನ್ನು ಪಡೆಯುವ ಹಿನ್ನೆಲೆಯಲ್ಲಿ ಆಯೋಜಿಸಲಾದ ಒಂದು ದಿನದ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಗುರುವಾರ ಮಾತನಾಡಿದರು.
ವಿವೇಕಾನಂದ ಕಾಲೇಜು ಮೆಂಟರ್ ಸಂಸ್ಥೆ ಸ್ಥಾನಮಾನವನ್ನು ನ್ಯಾಕ್‌ನಿಂದ ಪಡೆದಿದೆ. ಹಾಗಾಗಿ ನ್ಯಾಕ್ ಮಾನ್ಯತೆ ಪಡೆಯಲು ಬೇಕಿರುವ ವಿವಿಧ ಅರ್ಹತೆಗಳ ಬಗೆಗೆ ಕಾಲಕಾಲಕ್ಕೆ ಮಾಹಿತಿ ನೀಡುವುದು ಹಾಗೂ ಎಲ್ಲ ರೀತಿಯ ಸಹಕಾರವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಅದರನ್ವಯ ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು ಉತ್ತಮ ಕಾರ್ಯ. ನ್ಯಾಕ್‌ನಿಂದ ಮಾನ್ಯತೆ ಗಳಿಸಲು ಕಾಲೇಜಿನ ಕಾರ್ಯವೈಖರಿಯಲ್ಲೂ ಉತ್ತಮ ಬದಲಾವಣೆಗಳಾಗಬೇಕು. ನ್ಯಾಕ್ ಸಂಸ್ಥೆಯ ಅಂಕಗಳನ್ನು ಗಳಿಸಿ ಇನ್ನಷ್ಟು ಉತ್ತಮ ಮಟ್ಟಕ್ಕೆ ಎಲ್ಲಾ ಸಂಸ್ಥೆಗಳೂ ಏರಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ನ್ಯಾಕ್ ಸಂಸ್ಥೆಯು ಕೆಲವೊಂದು ಮಾನದಂಡಗಳನ್ನು ಗಮನಕ್ಕೆ ತೆಗೆದುಕೊಂಡು ಅಂಕ ನೀಡುವುದಾಗಿದ್ದು, ಅದಕ್ಕಾಗಿ ಕಾಲೇಜು ತನ್ನ ಗುಣಮಟ್ಟದ ಬಗೆಗೆ ನೀಡುವ ಪೂರಕ ಮಾಹಿತಿ ಬಹಳ ಪ್ರಮುಖವಾಗಿರುತ್ತದೆ ಎಂದರಲ್ಲದೆ ನ್ಯಾಕ್ ಸಂಸ್ಥೆಗೆ ಮಾಹಿತಿಗಳನ್ನು ಹೇಗೆ ಸಲ್ಲಿಸಬೇಕು ಹಾಗೂ ಕಾಲೇಜು ಬಳಸಬೇಕಾದ ವ್ಯವಸ್ಥಿತ ಕ್ರಮಗಳ ಬಗೆಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ. ಜಯರಾಮ್ ಭಟ್ ಕಾಲೇಜಿನ ಗಣಕಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಗಣೇಶ್ ಪ್ರಸಾದ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಶ್ರೀಧರ್ ಹೆಚ್.ಜಿ. ಸ್ವಾಗತಿಸಿ ವಂದಿಸಿದರು.