ಪುತ್ತೂರು: ಭಾರತದ ಸಂಪನ್ನತೆ ಸಮೃದ್ಧತೆ ಹಾಗೂ ಕಲ್ಯಾಣವೆಂದರೆ ಅದು ಪ್ರಪಂಚದ ಉನ್ನತಿಕೆ ಹಾಗೂ ಉತ್ಕೃಷ್ಟತೆ ಎಂಬುದನ್ನು ಸ್ವತಃ ಆಚರಿಸಿ ತೋರಿಸಿದ ರಾಷ್ಟ್ರ ಭಾರತ. ವ್ಯಕ್ತಿಯ ವಿಕಾಸದಿಂದ ಕುಟುಂಬದ ವಿಕಾಸ, ಅದರಿಂದ ಸಮಾಜದ ಬೆಳವಣಿಗೆ ಹಾಗೂ ತನ್ಮೂಲಕ ರಾಷ್ಟ್ರದ ಬೆಳವಣಿಗೆ ಎಂಬುದನ್ನು ಪ್ರಪಂಚಕ್ಕೇ ಸಾರಿದ ದೇಶ ನಮ್ಮದು.
ಅಂತೆಯೇ ಗುರುವನ್ನು ಗೌರವಿಸುವ ಆಚರಣೆಯ ಮೂಲಕ ಸ್ವತಃ ತಾನೇ ವಿಶ್ವಗುರುವೆನಿಸಿಕೊಂಡಂತಹ ಪವಿತ್ರ ಪ್ರದೇಶ ನಮ್ಮ ದೇಶ ಎಂದು ಮೈಸೂರಿನ ಮಹಾರಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ವಿವೇಕಾನಂದ ಜಯಂತಿ ೨೦೧೯ರಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ದರಿದ್ರ ನಾರಾಯಣ ದೇವೋ ಭವ ಎಂಬ ಕಲ್ಪನೆಯನ್ನು ಜಾಗತಿಕವಾಗಿ ಒಡಮೂಡಿಸಿದವರು ಸ್ವಾಮಿ ವಿವೇಕಾನಂದರು. ಸಮಾಜದ ಜಾತೀಯತೆ, ಅಸ್ಪೃಷ್ಯತೆ, ಒಡಕುಗಳು ದೂರವಾಗಬೇಕೆಂಬ ತಾಯಿತನದ ಮನಸ್ಸನ್ನು ಹೊಂದಿದವರು ಅವರು. ಪಾಶ್ಚಾತ್ಯ ದೇಶಗಳ ತಂತ್ರಜ್ಞಾನ ವಿಜ್ಞಾನದೊಂದಿಗೆ ಭಾರತೀಯ ಆಧ್ಯಾತ್ಮ ಸೇರಿದಾಗ ಅದ್ಭುತ ಬೆಳವಣಿಗೆ ಸಾಧ್ಯ ಎಂಬುದನ್ನು ಮನಗಂಡವರು ವಿವೇಕಾನಂದರು. ಆದರೆ ಇಂದು ಆಧ್ಯಾತ್ಮ ಹಾಗೂ ವಿಜ್ಞಾನ ಬೇರೆ ಬೇರೆ ಎಂಬ ಭ್ರಮೆಯಲ್ಲಿ ಅನೇಕರಿರುವುದು ದುರಂತ ಎಂದು ನುಡಿದರು.
ಪ್ರಪಂಚದ ಬೇರೆ ಬೇರೆ ಧರ್ಮ ಸಿದ್ಧಾಂತಗಳು ಮನುಷ್ಯ ಒಬ್ಬ ಪಾಪಿ, ಆತ ಒಬ್ಬ ಆರ್ಥಿಕ ಪ್ರಾಣಿ, ರಾಜಕೀಯ ಪ್ರಾಣಿ ಎಂದು ಗುರುತಿಸಿರುವಾಗ ಮನುಷ್ಯ ಅಮೃತಪುತ್ರ ಎಂಬ ಉಪನಿಷತ್ತಿನ ತತ್ವವನ್ನು ಸಾರಿದವರು ವಿವೇಕಾನಂದರು. ಪ್ರತಿಯೊಬ್ಬ ಮನುಷ್ಯ ಆಧ್ಮಾತ್ಮಿಯಾದಾಗ ಮಾತ್ರ ಆತ್ಮಕಲ್ಯಾಣ ಸಾಧ್ಯ ಎಂದು ನುಡಿದವರು.
ವಿವೇಕಾನಂದರು ಕೇವಲ ಹಿಂದೂ ಧರ್ಮಕ್ಕೆ ಅಥವ ಭಾರತಕ್ಕೆ ಸೀಮಿತರಲ್ಲ, ಬದಲಾಗಿ ವಿಶ್ವಧರ್ಮಕ್ಕೆ ಸೇರಿದವರು. ಈ ಕಾರಣಕ್ಕಾಗಿಯೇ ವಿವೇಕಾನಂದರನ್ನು ಜಗತ್ತೇ ಆರಾಧಿಸುತ್ತದೆ. ಆದರೆ ದುರಂತವೆಂದರೆ ಇಂತಹ ಪುಣ್ಯಪುರುಷನ ಜನ್ಮಭೂಮಿಯಲ್ಲಿ ಇಂದು ಅಂಕ ಆಧಾರಿತ ಶಿಕ್ಷಣ ಹಾಗೂ ದುಡ್ಡಿನ ಆಧಾರಿತ ಉದ್ಯೋಗವನ್ನು ಪಡೆಯುವ ದಾರಿಯನ್ನು ತೋರಿಸಿಕೊಡಲಾಗುತ್ತಿದೆ ಎಂದು ವಿಷಾದಿಸಿದರು.
ನಮ್ಮ ಸಮಾಜ ಇಂದು ಅಪನಂಬಿಕೆ ಹಾಗೂ ಸ್ವಾರ್ಥಗಳಿಂದ ಕುಸಿಯುತ್ತಿದೆ. ಕೆಲವು ರಾಜಕಾರಣಿಗಳಿಗೆ ಶ್ರೀರಾಮನ ತಂದೆ ತಾಯಿಯರ ಬಗೆಗೆ ಅನುಮಾನ ಕಾಡಲಾರಂಭಿಸಿದರೆ ಮತ್ತೆ ಪ್ರೊ.ಭಗವಾನ್ ಅಂತಹ ಕೆಲವರಿಗೆ ರಾಮನ ಚಾರಿತ್ರ್ಯದ ಬಗೆಗೆ ಅನುಮಾನ ಆರಂಭಗೊಂಡಿದೆ. ಹುಟ್ಟಿನ ಬಗೆಗೆ ನಂಬಿಕೆಯಿಲ್ಲದವರ ಮಧ್ಯೆ ಬದುಕಿನ ಬಗೆಗೆ ನಂಬಿಕೆ ಇಟ್ಟುಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರಲ್ಲದೆ, ಬೌದ್ಧಿಕ ದಾರಿದ್ರ್ಯ ಇಂದು ಶಿಕ್ಷಿತ ವರ್ಗವನ್ನು ಆವರಿಸಿರುವುದು ಬಹುದೊಡ್ಡ ಆತಂಕಕಾರಿ ವಿಚಾರ ಎಂದು ಅಭಿಪ್ರಾಯಪಟ್ಟರು.
ಇಂದು ಭಾರತದ ಯೋಗವನ್ನು ಪ್ರಾಪಂಚಿಕವಾಗಿ ಪ್ರಸ್ತುತಪಡಿಸಿದ, ಯೋಗ ದಿನವನ್ನಾಗಿ ರೂಪಿಸಿದ ಕೀರ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಲ್ಲಬೇಕು. ಅಂತೆಯೇ ಕನ್ಯಾಕುಮಾರಿಯ ಏಕಶಿಲೆಯಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಕೀರ್ತಿಯೂ ಆರ್‌ಎಸ್‌ಎಸ್‌ಗೇ ಸಲ್ಲಬೇಕು. ಏಕನಾಥ್ ಜಿ ರಾನಡೆ ಅನ್ನುವ ಸಂಘದ ಹಿರಿಯರಿಂದಾಗಿ ಈ ಕಾರ್ಯ ಸಾಧ್ಯವಾಗಿತ್ತು. ಇಂತಹ ಉತ್ಕೃಷ್ಟ ಕಾರ್ಯ ಕೋಮುವಾದವೆನಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ ಮೊಬೈಲ್‌ಗೆ ಹೇಗೆ ಒಂದು ಪವರ್ ಬ್ಯಾಂಕ್ ಉಪಯುಕ್ತವೆನಿಸುತ್ತದೆಯೋ ಅದೇ ರೀತಿ ಯುವಶಕ್ತಿಗೆ ಸ್ವಾಮಿ ವಿವೇಕಾನಂದರು ಪವರ್ ಬ್ಯಾಂಕ್ ಆಗಿ ಪ್ರೇರಣೆ ಒದಗಿಸುತ್ತಾರೆ. ಹಾಗಾಗಿಯೇ ವಿವೇಕಾನಂದ ಜಯಂತಿ ಅನ್ನುವುದು ನಮ್ಮ ಶಕ್ತಿಯನ್ನು ಮತ್ತಷ್ಟು ಚೈತನ್ಯಗೊಳಿಸುವುದಕ್ಕೆ ಕಾರಣವೆನಿಸುತ್ತದೆ. ಕವಿವಾಣಿಯಂತೆ ನಮ್ಮ ದೇಶದಲ್ಲಿ ಏನೇ ಇದ್ದರೂ ಮನೆಯ ಮಕ್ಕಳು ಮಲಗಿ ನಿದ್ರಿಸುತಿದ್ದರೆ ಏನು ಪ್ರಯೋಜನ ಎಂದು ಕೇಳಿದರು.
ನಮ್ಮ ನಡುವಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕ್ಯಾಂಪಸ್ ಸಂದರ್ಶನ ಆಗುವುದನ್ನು ನಾವು ಗಮನಿಸುತ್ತಿದ್ದೇವೆ. ಆದರೆ ಶತಮಾನದ ಹಿಂದೆಯೇ ಸ್ವಾಮಿ ವಿವೇಕಾನಂದರು ಈ ದೇಶದಲ್ಲಿ ಒಂದು ಕ್ಯಾಂಪಸ್ ಸಂದರ್ಶನಕ್ಕೆ ಬರುವಂತೆ ಕರೆಕೊಟ್ಟಿದ್ದಾರೆ. ನೂರು ಜನ ಸಮರ್ಥ ಯುವಕರು ಬೇಕು ಎಂದು ಕೇಳಿಕೊಂಡಿದ್ದಾರೆ. ಆದರೆ ಅಂತಹ ಯುವಕರು ಇನ್ನೂ ತಯಾರಾಗಿಲ್ಲ. ಹಾಗಾಗಿಯೇ ವಿವೇಕಾನಂದ ವಿದ್ಯಾವರ್ಧಕ ಸಂಘ ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡಿ ಶಿಕ್ಷಣದ ಮೂಲಕ ಸಮರ್ಥರನ್ನು ರೂಪಿಸುವುದಕ್ಕೆ ಯತ್ನಿಸುತ್ತಿದೆ. ಅಲ್ಲಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆದು ಸುಮಾರು ಏಳು ಸಾವಿರದಷ್ಟು ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ಒದಗಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರುಗಳು. ವಿವಿಧ ವಿವೇಕಾನಂದ ಸಂಸ್ಥೆಗಳ ಆಡಳಿತ ಮಂಡಳಿ ಹಿರಿಯರು, ಪ್ರಾಚಾರ್ಯರು, ಉಪನ್ಯಾಸಕ ವೃಂದ, ಬೋಧಕೇತರ ವೃಂದ ಹಾಗೂ ಸುಮಾರು ಎಂಟು ಸಾವಿರದಷ್ಟು ವಿದ್ಯಾರ್ಥಿಗಳು ಮತ್ತು ಆರುನೂರಕ್ಕೂ ಮಿಕ್ಕ ಆಹ್ವಾನಿತರು ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ.ಸುಧಾ ರಾವ್ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಸುರೇಂದ್ರ ಕಿಣಿ ವಂದಿಸಿದರು.