Recent Posts

Tuesday, November 26, 2024
ಸುದ್ದಿ

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ವಿವೇಕಾನಂದ ಜಯಂತಿ ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಭಾರತ ನೆಲದ ಸಂಸ್ಕೃತಿ ಪರಂಪರೆಯ ಪರಿಚಯವನ್ನು ವಿಶ್ವಕ್ಕೆ ಮಾಡಿಕೊಟ್ಟ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತ ಹಾಗೂ ಹಿಂದೂ ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಿ ವಿಶ್ವದ ಗಮನವನ್ನು ಭಾರತದತ್ತ ಸೆಳೆದವರು ವಿವೇಕಾನಂದರು.

ಇವರ ಜನುಮದಿನನ್ನು ರಾಷ್ಟ್ರಮಟ್ಟದಲ್ಲಿ ಯುವದಿನವನ್ನಾಗಿ ಆಚರಿಸಲಾಗುತ್ತದೆ. ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿದ್ಯಾಸಂಸ್ಥೆಗಳು ಪ್ರತಿವರ್ಷ ವಿವೇಕಾನಂದ ಜಯಂತಿಯನ್ನು ಅರ್ಥಪೂರ್ಣವಾಗಿ ಆಯೋಜಿಸುತ್ತಾ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ ೧೫೬ನೇ ಜನ್ಮದಿನಾಚರಣೆ ಹಾಗೂ ರಾಷ್ಟೀಯ ಯುವ ದಿನಾಚರಣೆಯ ಪ್ರಯುಕ್ತ ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ವಿದ್ಯಾ ಸಂಸ್ಥೆಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿದ್ದವು. ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಶಿವನ ಮಹಿಮೆಗಳನ್ನು ಸಾರುವ ಶಂಕರಾಭರಣ, ಶಿವತಾಂಡವ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಮಣಿಕಂಠನ ಮಹಿಮೆಯೂ ಈ ವಿದ್ಯಾರ್ಥಿಗಳ ಅಭಿನಯದಲ್ಲಿ ಮೂಡಿಬಂತು. ವಿದ್ಯಾರ್ಥಿಗಳಾದ ಖುಷಿ ಪುತ್ತೂರಾಯ ಹಾಗೂ ದಿಶಾ ಕಾರ್ಯಕ್ರಮ ನಿರೂಪಿಸಿದರು.

ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮಹಿಳಾ ಸಾಧಕಿಯರ ಕತೆ ಪ್ರಸ್ತುತ ಪಡಿಸುವ ಮೂಲಕ ಗಮನ ಸೆಳೆದರು. ಮಹಿಳಾ ಸಬಲೀಕರಣದ ಕುರಿತಾಗಿ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು. ಮಹಿಳಾ ಸಾಧಕಿಯರ ಕುರಿತ ಮಾತುಗಳೇ ಹಿನ್ನಲೆ ಸಂಗೀತವಾಗಿದ್ದವು.

ಒಂದೆಡೆ ವಿದ್ಯಾರ್ಥಿಗಳು ಮಾತುಗಳ ಮೂಲಕ ಹೊಸ ಚೇತನವನ್ನು ಭಿತ್ತುತಿದ್ದರೆ ಮತ್ತೊಂದೆಡೆ ವಿದ್ಯಾರ್ಥಿಗಳು ಆ ವಿಷಯಗಳನ್ನು ಅಭಿನಯಿಸಿ ತೋರಿಸುತ್ತಿದ್ದುದು ವಿಶಿಷ್ಟವಾಗಿತ್ತು. ಇವರೊಂದಿಗೆ ವಿವಿಧ ಸಾಧಕಿಯರ ವೇಷ ತೊಟ್ಟಿದ್ದ ವಿದ್ಯಾರ್ಥಿನಿಯರೂ ಜೊತೆಯಾಗಿದ್ದರು. ವಿದ್ಯಾರ್ಥಿ ಸಾತ್ವಿಕ್ ಹಾಗೂ ಬಳಗದವರು ಕಾರ್ಯಕ್ರಮ ನಿರೂಪಿಸಿದರು.

ಜಾಲ್ಸೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಾರ್ಗಿಲ್ ಯುದ್ಧದ ಚಿತ್ರಣವನ್ನು ವೇದಿಕೆಯ ಮೇಲೆ ತಂದರು. ಹಗಲು ಇರುಳೆನ್ನದೆ ಗಡಿ ಕಾಯುವ ಯೋಧರ ದಿನಚರಿ, ಅವರ ಕಠಿಣ ಕಾರ್ಯವೈಖರಿಯ ಝಲಕ್‌ನ್ನು ಪ್ರಸ್ತುತ ಪಡಿಸಿದರು. ನೃತ್ಯದ ಮೂಲಕ ಮಾತೃಭೂಮಿಗೆ ವಂದಿಸಿದರು. ವಿವೇಕಾನಂದ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೀಕೃಷ್ಣನ ಲೀಲಾಮೃತವನ್ನು ನೆರೆದ ಜನ ಸಮೂಹಕ್ಕೆ ಉಣಬಡಿಸಿದರು.

ಎರಡು ನೃತ್ಯಗಳ ಮೂಲಕ ವಿದ್ಯಾರ್ಥಿನಿಯರ ತಂಡ ಬಾಲಕ ಕೃಷ್ಣನ ಸಾಹಸಲೀಲೆಗಳು, ಮಹಿಮೆಗಳು ಗೋಪಿಕೆಯರೊಂದಿಗಿನ ಅವನ ರಾಸಲೀಲೆಯನ್ನು ಒಳಗೊಂಡಿತ್ತು. ಜಗತ್ತಿಗೆ ಭಾರದ ಅದ್ಭುತ ಕೊಡುಗೆ ಯೋಗ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ಜಾನಪದ ನೃತ್ಯದ ಮೂಲಕ ಸುಗ್ಗಿಯನ್ನು ಸಂಭ್ರಮಿಸಿದರು. ದೇಶಭಕ್ತಿಗೀತೆಗಳ ಮೂಲಕ ಭಾರತಾಂಬೆಗೆ ನಮನ ಸಲ್ಲಿಸಿದರು.

ವಿದ್ಯಾರ್ಥಿಗಳಾದ ಶ್ರೀವತ್ಸ ಭಾರದ್ವಾಜ್ ಹಾಗೂ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಸ್ನಾತಕೋತ್ತರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸುಬ್ರಾಯ ಚೊಕ್ಕಾಡಿ ವಿರಚಿತ ಪ್ರಕೃತಿ ಗೀತೆಯನ್ನು ಪ್ರಸ್ತುತ ಪಡಿಸಿದರು. ದೇಶಭಕ್ತಿಗೀತೆ, ಭರತನಾಟ್ಯದ ಮೂಲಕ ನಾಡು ನುಡಿಗೆ ನಮನ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಕೌಶಿಕ್ ಕೆ.ಎಂ. ನಡೆಸಿಕೊಟ್ಟರು.

ತೆಂಕಿಲ ನರೇಂದ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತುಳು ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ನೃತ್ಯವನ್ನು ಪ್ರಸ್ತುತ ಪಡಿಸಿದರು. ತುಳುವರ ಸುಗ್ಗಿಯನ್ನು ವೇದಿಕೆಯ ಮೇಲೆ ಸಂಭ್ರಮಿಸಿದರು. ವಿದ್ಯಾರ್ಥಿನಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾರತದ ಸಂಸ್ಕೃತಿ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ನೀಡಿದರು. ಶಾಸ್ತ್ರಿಯ ನೃತ್ಯ, ಕೀಬೋರ್ಡ್ ಹಾಗೂ ತಬಲ ವಾದನದ ಮೂಲಕ ದೇವರನ್ನು ಸ್ಮರಿಸಿದರು. ಭಾವಗೀತೆಗಳ ಮೂಲಕ ಭಾವನೆಗಳನ್ನು ಮೀಟಿದರು. ವಿದ್ಯಾರ್ಥಿನಿ ಯಶ್ವಿ ಕಾರ್ಯಕ್ರಮ ನಿರೂಪಿಸಿದರು.

ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭರತನಾಟ್ಯ ಜುಗಾಲ್ಬಂದಿಯ ಮೂಲಕ ಶ್ರೀಕೃಷ್ಣನ ಮಹಿಮೆಯನ್ನು ಪ್ರಸ್ತುತಪಡಿಸಿದರು. ಯಕ್ಷಗಾನದ ಮೂಲಕ ಮನಸೂರೆಗೊಂಡರು. ತಿಲ್ಲಾನ ಮೂಲಕ ತಮ್ಮ ತಂಡದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ವಿದ್ಯಾರ್ಥಿನಿಯರಾದ ಮೈಥಿಲಿ, ಅಂಶಿಕಾ, ರುಚಿಕಾ ಕಾರ್ಯಕ್ರಮ ನಿರೂಪಿಸಿದರು. ಮುಂಡಾಜೆಯ ಸರಸ್ವತಿ ಪ್ರೌಢಶಾಲೆ ವಿದ್ಯಾರ್ಥಿಗಳು ಭಜನೆ ಮೂಲಕ ದೇವರನ್ನು ಸ್ಮರಿಸಿದರು. ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯುವ ನೃತ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿನಿ ರಶ್ಮಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕೊನೆಯದಾಗಿ ಪೆರ್ಲಂಪಾಡಿಯ ಷಣ್ಮುಖದೇವ ಪ್ರೌಢಶಾಲೆ ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ಸಿಡಿಲ ಸನ್ಯಾಸಿಗೆ ಕಲಾಸೇವೆಗೈದರು. ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ. ವಿಜಯ ಸರಸ್ವತಿ ಹಾಗೂ ಕಾಲೇಜಿನ ಲಲಿತಕಲಾ ಸಂಘದ ಸಂಯೋಜಕ ಕನ್ನಡ ಪ್ರಾಧ್ಯಾಪಕ ಡಾ. ಮನಮೋಹನ್ ಹಾಗೂ ಲಲಿತ ಕಲಾಸಂಘದ ಪದಾಧಿಕಾರಿಗಳು ಕಾರ್ಯಕ್ರಮವನ್ನು ಸಂಯೋಜಿಸಿದರು.