ನವದೆಹಲಿ: ಇಂಡಿಯಾ ಗೇಟ್ ನಲ್ಲಿ ಗಣರಾಜ್ಯೋತ್ಸವಕ್ಕೆ ರಿಹರ್ಸಲ್ ನಡೆಸುತ್ತಿದ್ದ ವೇಳೆ ಮಹಿಳೆಯೊಬ್ಬರು `ಪಾಕಿಸ್ತಾನ್ ಜಿಂದಾಬಾದ್’ ಕೂಗಿದ ಘಟನೆಯು ನಡೆದಿದೆ.
ಬಿಗಿ ಭದ್ರತೆಯನ್ನು ದಾಟಿ ಬಂದಿದ್ದ ಮಹಿಳೆ ಗಣರಾಜ್ಯೋತ್ಸವಕ್ಕೆ ಸೇನೆ ಹಾಗೂ ಪೊಲೀಸರು ರಿಹರ್ಸಲ್ ನಡೆಸುತ್ತಿದ್ದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಮಹಿಳೆಯು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಮಹಿಳೆಯನ್ನು ಹೈದರಾಬಾದ್ ನ ನಿಜಾಮಾಬಾದ್ ನ ಸುಲ್ತಾನ ಎಂದು ಗುರುತಿಸಲಾಗಿದೆ. ಇಂಡಿಯಾ ಗೇಟ್ ನಲ್ಲಿರುವ ಅಮರ್ ಜವಾನ್ ಜ್ಯೋತಿಯೊಳಗೆ ನುಗ್ಗಲು ಮಹಿಳೆಯು ಪ್ರಯತ್ನಿಸುತ್ತಿದ್ದ ವೇಳೆ ಆಕೆಯನ್ನು ಭದ್ರತಾ ಸಿಬ್ಬಂದಿ ತಡೆಯಿಡಿದಿದ್ದಾರೆ.
ದೆಹಲಿ ಪೊಲೀಸರು ಮಹಿಳೆಯನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯು ನಿಜಾಮಾಬಾದ್ ನಿಂದ ಮುಂಬಯಿಗೆ ಸಂಬಂಧಿಕರ ಮನೆಗೆಂದು ತೆರಳಿದ್ದು, ದಾರಿ ತಪ್ಪಿ ದೆಹಲಿಗೆ ಬಂದಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.