Saturday, November 23, 2024
ಸುದ್ದಿ

ಉದ್ಯೋಗ ಬದುಕಿನ ಯಶಸ್ಸಿಗಾಗಿ ಜೀವನ ಕೌಶಲ್ಯ: ಶ್ರೀನಾಥ್ ಸೇತುರಾಮ್ – ಕಹಳೆ ನ್ಯೂಸ್

ಪುತ್ತೂರು: ಉದ್ಯೋಗ ಎನ್ನುವುದು ಜೀವನದ ಒಂದು ಅವಿಭಾಜ್ಯ ಅಂಗ. ಉತ್ತಮ ಉದ್ಯೋಗವನ್ನು ಗಳಿಸಿಕೊಳ್ಳಲು ಹಾಗೂ ಉದ್ಯೋಗ ಜೀವನದಲ್ಲಿ ಉನ್ನತಿಯನ್ನು ಹೊಂದುವಲ್ಲಿ ಜೀವನ ಕೌಶಲ್ಯ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ವೃತ್ತಿಯನ್ನು ನಿರ್ವಹಿಸಲು ನಾವು ಸಿದ್ದರಿದ್ದಲ್ಲಿ ನಮಗಾಗಿ ಒಂದಿಲ್ಲೊಂದು ಉದ್ಯೋಗ ಇದ್ದೇ ಇರುತ್ತದೆ ಎಂದು ಬೆಂಗಳೂರಿನ ಫಸ್ಟ್ ರೌಂಡ್ ಸೊಲ್ಯೂಶನ್ಸ್ನ ತರಬೇತುದಾರ ಶ್ರೀನಾಥ್ ಸೇತುರಾಮ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ನೇತೃತ್ವದಲ್ಲಿ ಆಯೋಜಿಸಿದ ‘ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗ ಕೌಶಲ್ಯ’ ಕುರಿತ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ತರಬೇತುದಾರರಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾವು ಏನು ಎಂಬುವುದರ ಅರಿವು ಮೊದಲು ನಮಗಾಗಬೇಕು. ಆಗ ಸವಾಲುಗಳನ್ನು ಎದುರಿಸುವ ತಾಕತ್ತು ನಮಲ್ಲಿ ಬೆಳೆಯುತ್ತದೆ. ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಚಾಕಚಕ್ಯತೆ ತಿಳಿಯಬೇಕಾದರೆ ಮೊದಲು ನಮ್ಮ ಆತ್ಮವಿಶ್ವಾಸ ಹೆಚ್ಚಬೇಕು. ನಮ್ಮ ಜೀವನ ನಿರ್ವಹಣೆಯಲ್ಲಿ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳಬೇಕು. ಎಂದಿಗೂ ಅದಕ್ಕಾಗಿ ಇತರರನ್ನು ಬಯಸಬಾರದು. ನಮ್ಮ ದೃಢ ನಿರ್ಧಾರಗಳು ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಲ್ಲವು ಎಂದರು.
ಉದ್ಯೋಗಾವಕಾಶಗಳನ್ನು ಅರಸುತ್ತಾ ಹೋದಾಗ ಅನೇಕ ಸವಾಲುಗಳು, ಋಣಾತ್ಮಕ ಫಲಿತಾಂಶಗಳೇ ಎದುರಾಗಬಹುದು. ಆದರೆ ಎಂದಿಗೂ ಪ್ರಯತ್ನಗಳನ್ನು ನಿಲ್ಲಿಸಬಾರದು. ಆತ್ಮಬಲ ಕುಗ್ಗಲು ಬಿಡಬಾರದು. ಭಾವನೆಗಳ ಮೇಲಿನ ಹಿಡಿತ ಮುಖ್ಯವೆನಿಸಿಕೊಳ್ಳುತ್ತದೆ. ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗ ಕೌಶಲ್ಯದ ಅಭಿವೃದ್ಧಿಯ ಮೇಲೆ ನಮ್ಮ ವ್ಯಕ್ತಿತ್ವ ಹಾಗೂ ನಡವಳಿಕೆಯ ಪ್ರಭಾವ ಇದ್ದೇ ಇದೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ‍್ಯಾಗಾರವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಮನಸ್ಸು ದುರ್ಬಲವಾಗಿದ್ದಾಗ ಎದುರಾಗುವ ಸಂದರ್ಭಗಳು ಸಮಸ್ಯೆಗಳಾಗಿ ಗೋಚರಿಸುತ್ತವೆ. ಸಮತೋಲನವನ್ನು ಕಾಯ್ದುಕೊಂಡಾಗ ಅವು ಸವಾಲುಗಳಾಗಿ ಬದಲಾಗುತ್ತವೆ. ಆದೇರೀತಿ ಸದೃಢ ಮನಸ್ಸು ಈ ಸಂದರ್ಭಗಳನ್ನು ಅವಕಾಶಗಳಾಗಿ ಬದಲಾಯಿಸಿಬಿಡಬಲ್ಲದು. ಸಮಸ್ಯೆಗಳನ್ನು ಮೆಟ್ಟಿನಿಲ್ಲಬೇಕಾದರೆ ಮೊದಲು ದುರ್ಬಲ ಮನಸ್ಥಿತಿಯನ್ನು ಮೀರಿ ಬೆಳೆಯಬೇಕು. ಸಮಸ್ಯೆಗಳು, ಸವಾಲುಗಳು ನಮ್ಮ ಜೀವನವನ್ನೇ ಒಂದು ಸಮಸ್ಯೆಯಾಗಿ ಪರಿವರ್ತಿಸುವುದನ್ನು ತಡೆಯಬಹುದು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ್ ಭಟ್ ಮಾತನಾಡಿ, ಭವಿಷ್ಯ ಎನ್ನುವುದು ಒಂದು ಅನಿರೀಕ್ಷಿತಗಳ ಗೊಂಚಲು. ಯಾವ ಸಂದರ್ಭದಲ್ಲಿ ಯಾವ ಸವಾಲು ಎದುರಾಗುತ್ತದೆ ಎಂಬುವುದನ್ನು ನಿರ್ದಿಷ್ಟವಾಗಿ ಊಹಿಸುವುದು ಕಷ್ಟಸಾಧ್ಯ. ತರಬೇತಿ ಕಾರ್ಯಕ್ರಮಗಳು, ತೊಡಗಿಸಿಕೊಳ್ಳುವಿಕೆ ನಮ್ಮನ್ನು ಆ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯಲು ಸಹಕಾರಿ. ಬುದ್ಧಿಬಲ, ಏಕಾಗ್ರತೆ, ಪರಿಶ್ರಮ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತವೆ ಎಂದು ಹೇಳಿದರು.

ಈ ಸಂದರ್ಭ ಶೈಕ್ಷಣಿಕವಾಗಿ ಸಾಧನೆಗೈದ ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರಾದ ಡಾ.ಮನೋಹರ್ ಹಾಗೂ ರಾಘವೇಂದ್ರ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಹೆಚ್.ಜಿ.ಶ್ರೀಧರ್ ಉಪಸ್ಥಿತರಿದ್ದರು.

ಪ್ರಥಮ ಎಂ.ಕಾಂ. ವಿದ್ಯಾರ್ಥಿನಿ ರಶ್ಮಿ ಬಿ. ಪ್ರಾರ್ಥಿಸಿದರು. ಸ್ನಾತಕೋತ್ತರ ವಿಭಾಗಗ ಸಂಯೋಜಕಿ ಡಾ.ವಿಜಯ ಸರಸ್ವತಿ ಸ್ವಾಗತಿಸಿ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಂಯೋಜಕ ಡಾ. ಕಾರಂತ್ ವಿಜಯಗಣಪತಿ ರಮೇಶ್ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಅನನ್ಯಾ ವಿ. ಕಾರ್ಯಕ್ರಮ ನಿರೂಪಿಸಿದರು.