ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ ಸೇನಾ ಜವಾನರಿಗೆ ಒದಗಿಸಲಾಗುತ್ತಿತ್ತೆನ್ನಲಾದ ಕಳಪೆ ಆಹಾರದ ಬಗ್ಗೆ ದೂರಿ ವೀಡಿಯೋ ಪೋಸ್ಟ್ ಮಾಡಿ ನಂತರ ಸೇನೆಯಿಂದ ಅಮಾನತುಗೊಂಡಿದ್ದ ಬಿಎಸ್‍ಎಫ್ ಜವಾನ ತೇಜ್ ಬಹಾದ್ದುರ್ ಯಾದವ್ ಪುತ್ರ 22 ವರ್ಷದ ರೋಹಿತ್ ಹರ್ಯಾಣದಲ್ಲಿನ ತನ್ನ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ರೇವಾರಿ ಜಿಲ್ಲೆಯ ಶಾಂತಿ ವಿಹಾರದಲ್ಲಿರುವ ತೇಜ್ ಬಹಾದ್ದುರ್ ನಿವಾಸದಲ್ಲಿ ಈ ಘಟನೆ ನಡೆದಿದೆ. ರೋಹಿತ್ ಕೊಠಡಿಯ ಬಾಗಿಲಿನ ಚಿಲಕ ಒಳಗಿನಿಂದ ಹಾಕಿತ್ತು. ಆತನ ದೇಹ ಹಾಸಿಗೆಯ ಮೇಲಿತ್ತು ಹಾಗೂ ಕೈಯ್ಯಲ್ಲಿ ಪಿಸ್ತೂಲ್ ಇತ್ತು ಎಂದು ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದಾಗ ತೇಜ್ ಬಹಾದ್ದುರ್ ಕುಂಭ ಮೇಳದಲ್ಲಿ ಭಾಗವಹಿಸಲು ತೆರಳಿದ್ದರು. 2017ರಲ್ಲಿ ತೇಜ್ ಬಹಾದ್ದುರ್ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಜವಾನರಿಗೆ ಕಳಪೆ ಆಹಾರ ಒದಗಿಸಲಾಗುತ್ತಿದೆ ಎಂದು ದೂರಿ ಪೋಸ್ಟ್ ಮಾಡಿದ್ದ ವೀಡಿಯೋ ಅಂತರ್ಜಾಲದಲ್ಲಿ ಭಾರೀ ಸುದ್ದಿ ಮಾಡಿತ್ತಲ್ಲದೆ ವಿವಾದಕ್ಕೂ ಈಡಾಗಿತ್ತು.
ಬಿಎಸ್‍ಎಫ್ ನ 29ನೇ ಬೆಟಾಲಿಯನ್‍ನಲ್ಲಿ ಕಾನ್‍ಸ್ಟೇಬಲ್ ಆಗಿದ್ದ ತೇಜ್ ಬಹಾದ್ದುರ್ ಪೂಂಚ್ ಜಿಲ್ಲೆಯ ಖೇತ್ ಎಂಬಲ್ಲಿ ಗಡಿ ನಿಯಂತ್ರಣಾ ರೇಖೆ ಸಮೀಪ ಕರ್ತವ್ಯದಲ್ಲಿದ್ದರು.
ಸೇನೆಯ ನಿಯಮಕ್ಕೆ ವಿರುದ್ಧವಾಗಿ ಎರಡು ಮೊಬೈಲ್ ಫೋನ್ ಹೊಂದಿದ್ದಕ್ಕಾಗಿ ಹಾಗೂ ಸಮವಸ್ತ್ರದಲ್ಲಿರುವಾಗ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ ತಪ್ಪಿಗೆ ಭದ್ರತಾ ಪಡೆಗಳ ನ್ಯಾಯಾಲಯ ತೇಜ್ ಬಹಾದ್ದುರ್ ಅವರನ್ನು ಸೇವೆಯಿಂದ ನಂತರ ಅಮಾನತುಗೊಳಿಸಿತ್ತು.