Sunday, November 24, 2024
ಸುದ್ದಿ

ಹಿರಿಯ ಸಾಹಿತಿ ಎ.ಪಿ.ಮಾಲತಿಗೆ ನಿರಂಜನ ಪ್ರಶಸ್ತಿ: ಜ.24 ರಂದು ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ಶಿವರಾಮಕಾರಂತ ಅಧ್ಯಯನ ಕೇಂದ್ರದ ವತಿಯಿಂದ ಕೊಡಮಾಡುವ 2018 ನೇ ಸಾಲಿನ ನಿರಂಜನ ಪ್ರಶಸ್ತಿಗೆ ಕನ್ನಡ ಸಾಹಿತ್ಯದ ಸೃಜನಶೀಲ ಬರಹಗಳಾದ ಕಾದಂಬರಿ, ಸಣ್ಣಕಥೆ, ಲೇಖನ, ಜೀವನಚರಿತ್ರೆ, ಆತ್ಮಕಥೆ ಮುಂತಾದ ಬರವಣಿಗೆಯಲ್ಲಿ ತೊಡಗಿಸಿಕೊಂಡ ಪುತ್ತೂರಿನ ಹಿರಿಯ ಸಾಹಿತಿ ಎ.ಪಿ. ಮಾಲತಿ ಅವರನ್ನು ಆಯ್ಕೆ ಮಾಡಲಾಗಿದೆ.

ಅವರು 6-5-1944 ರಂದು ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜನಿಸಿದರು. ಪ್ರಸ್ತುತ ಪುತ್ತೂರಿನ ಆರ್ಯಾಪುಗ್ರಾಮದ ಸಂಟ್ಯಾರಿನಲ್ಲಿ ವಾಸಮಾಡುತ್ತಿದ್ದಾರೆ. ಪತಿಯ ಹೆಸರು ಎ.ಪಿ.ಗೋವಿಂದ ಭಟ್ಟ. ಇವರಿಗೆ ಇಬ್ಬರು ಮಕ್ಕಳು. ಮಗ ಡಾ. ಎ.ಪಿ.ರಾಧಾಕೃಷ್ಣ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರು. ಮಗಳು ಲಲಿತಾ ಮೈಸೂರಿನಲ್ಲಿ ಉಧ್ಯಮಿ. ಇವರದು ಮೂವರು ಮೊಮ್ಮಕ್ಕಳ ಸಂತೃಪ್ತ ಕುಟುಂಬ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಧಾಂಗಿ, ಆಘಾತ, ಅನಿಶ್ಚಯ, ಅತೃಪ್ತೆ, ಅಲೋಕ, ಹೊಸಹೆಜ್ಜೆ, ಮಿನುಗದ ಚುಕ್ಕೆ, ಸರಿದ ತೆರೆ, ಬದಲಾಗದವರು, ದೇವ, ಅಂಜನಾ, ತಿರುಗಿದ ಚಕ್ರ, ಪುನರ್ಮಿಲನ, ನೂಪುರಗಾನ, ಕಾಡುಕರೆಯಿತು, ವಕೃರೇಖೆ, ಮಂದಾರ, ಖಾಲಿಮನೆ, ಪುಣ್ಯದ ಎಣ್ಣೆ, ಹಸಿರು ಹೀಗೆ ಒಟ್ಟು 20 ಕಾದಂಬರಿಗಳನ್ನು ರಚಿಸಿದ್ದಾರೆ. ಕಾದಂಬರಿಗಳಲ್ಲಿ ಹೆಣ್ಣಿನ ಜೀವನದ ಸೂಕ್ಷ್ಮತೆಗಳು ಪ್ರಮುಖ ವಸ್ತುವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಸಂತದ ಹೂವುಗಳು ಮತ್ತು ಸಂಜೆ ಬಿಸಿಲು ಸಣ್ಣಕಥಾ ಸಂಕಲನಗಳು. ಗ್ರಾಮೀಣ ಮಹಿಳೆಯರು, ಹಳ್ಳಿಗೆ ಬಂದ ಎಳೆಯರು, ಸುಖದ ಹಾದಿ, ಮಕ್ಕಳಪಾಲನೆ, ದಿವ್ಯಪಥ, ಸಮಯದ ಸದುಪಯೋಗ, ಮಹಿಳೆ – ಸಮಾಜ ಕಲ್ಯಾಣ, ಸಂತೋಷದ ಹುಡುಕಾಟ ವಿಮರ್ಶಾ ಕೃತಿಗಳು. ಕಾರುಣ್ಯನಿಧಿ ಶ್ರೀಮಾತೆ ಶ್ರೀಶಾರದಾದೇವಿ, ಅನನ್ಯ ಅನುವಾದಕ ಶ್ರೀ ಅಹೋಬಲಶಂಕರ ಜೀವನ ಚರಿತ್ರೆಯ ಕೃತಿಗಳು. ಮಹಿಳೆ-ಪರಿವರ್ತನೆಯ ಹಾದಿಯಲ್ಲಿ ಲೇಖನಗಳ ಸಂಗ್ರಹ ಕೃತಿ. ಸ್ಮೃತಿಯಾನ ಇವರ ಆತ್ಮಕಥೆ.

ಸುಖದಹಾದಿ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಗ್ರಾಮೀಣ ಮಹಿಳೆಯರು ಮತ್ತು ಅನಿಶ್ಚಯ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಬಹುಮಾನ, ಕಾಡುಕರೆಯಿತು, ಖಾಲಿಮನೆ ಕಾದಂಬರಿಗಳಿಗೆ ಮಾತೋಶ್ರೀರತ್ನಮ್ಮ ಹೆಗ್ಗಡೆ ಬಹುಮಾನಗಳು ಬಂದಿವೆ. ಮಂದಾರ, ತಿರುಗಿದ ಚಕ್ರ, ವಕ್ರರೇಖೆ ಕಾದಂಬರಿಗಳಿಗೆ ವನಿತಾ ಮಾಸ ಪತ್ರಿಕೆ ನಡೆಸಿದ ಸ್ಪರ್ಧೆಗಳಲ್ಲಿ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳು ಬಂದಿವೆ. ಸಂಜೆ ಬಿಸಿಲು ಕಥಾ ಸಂಕಲನಕ್ಕೆ ಕಥಾರಂಗಂ ಪ್ರಶಸ್ತಿ ಬಂದಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ದೇವ ಕಾದಂಬರಿ ಪಠ್ಯಪುಸ್ತಕವಾಗಿದೆ. ಮಂದಾರ ಕಾದಂಬರಿ ಧಾರಾವಾಹಿಯಾಗಿ ಟಿ.ವಿ.ಯಲ್ಲಿ ಪ್ರಸಾರವಾಗಿದೆ. ಅಂಜನ ಕಾದಂಬರಿ ಸಂಸ್ಕೃತಕ್ಕೆ ಅನುವಾದಗೊಂಡಿದೆ. ಹೀಗೆ ಇವರ ಕೃತಿಗಳು ಬಹುಮಾನಗಳಿಗೆ, ಪಠ್ಯಪುಸ್ತಕವಾಗಿ, ಅನುವಾದವಾಗಿ, ಟಿ.ವಿ.ಯಲ್ಲಿ ಧಾರಾವಾಹಿಯಾಗಿ, ಆಕಾಶವಾಣಿಯಲ್ಲಿ ಸಣ್ಣಕಥೆ, ಲೇಖನಗಳು ಪ್ರಸಾರವಾಗಿ, ಅನೇಕ ಸಣ್ಣಕಥೆಗಳು ತೆಲುಗು, ಮಲೆಯಾಳಕ್ಕೆ ಅನುವಾದವಾಗುವ ಮೂಲಕ ಎ.ಪಿ.ಮಾಲತಿಯವರ ಕೃತಿ ಶ್ರೇಣಿಗಳಿಗೆ ಗೌರವ ಪ್ರಾಪ್ತಿಯಾಗಿದೆ.

ಕರಾವಳಿ ಲೇಖಕಿ ವಾಚಕಿಯರ ಸಂಘದ ಪ್ರಥಮ ಮಹಿಳಾ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ, ೧೧ನೇ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ೨೧ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಗಳು ಎ.ಪಿ.ಮಾಲತಿಯವರಿಗೆ ಪ್ರಾಪ್ತವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಭಾರ್ಗವ ಪಶಸ್ತಿ, ಕರ್ಕಿ ಸೂರಿ ವೆಂಕಟರಮಣಶಾಸ್ತ್ರೀ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷರಾಗಿ ೨೦೦೯ ರಿಂದ 2011 ರವರೆಗೆ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಹೀಗೆ ಕನ್ನಡ ಸಾಹಿತ್ಯದ ಸೃಜನಶೀಲ ಬರಹಗಳಾದ ಕಾದಂಬರಿ, ಸಣ್ಣಕಥೆ, ಲೇಖನ, ಜೀವನಚರಿತ್ರೆ, ಆತ್ಮಕಥೆ ಮುಂತಾದ ಬರವಣಿಗೆಯಲ್ಲಿ ತೊಡಗಿಸಿಕೊಂಡ ಎ.ಪಿ.ಮಾಲತಿ ಅವರಿಗೆ ೨೦೧೮ನೇ ಸಾಲಿನ ನಿರಂಜನಪ್ರಶಸ್ತಿಯನ್ನು ದಿನಾಂಕ 24-01-2018 ನೇ ಗುರುವಾರ ವಿವೇಕಾನಂದ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಪ್ರಶಸ್ತಿಪತ್ರ, ಸ್ಮರಣಿಕೆ ಮತ್ತು ರೂಪಾಯಿ ೧೫,೦೦೦ ಮೊತ್ತದ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುತ್ತದೆ.