ಪುತ್ತೂರು: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇದೆ. ಅದನ್ನು ಗುರುತಿಸಲು ಅವಕಾಶ ಹಾಗೂ ಒಂದು ವೇದಿಕೆಯ ಅವಶ್ಯಕತೆಯಿರುತ್ತದೆ. ತಮ್ಮ ವಿದ್ಯಾರ್ಥಿಗಳು ತಮ್ಮಲ್ಲಿದ್ದ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಸದವಕಾಶ ಮಾಡಿಕೊಟ್ಟಿತ್ತು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಲಲಿತಕಲಾಸಂಘ. ಶುಕ್ರವಾರ ನಡೆದ ಪ್ರತಿಭಾ ದಿನ ವಿಶೇಷ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವಂತೆ ಮಾಡಿತು.
ಮರೆಯಾದ ನಿಷ್ಟಾವಂತ ಪೋಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಸಂಗೀತದ ಭಾವಾಂಜಲಿ ಸಲ್ಲಿಸಿದವರು ಪ್ರಥಮ ಬಿ.ಎ ವಿದ್ಯಾರ್ಥಿಗಳು. ಹಿಂದೂಸ್ತಾನವು ಎಂದಿಗೂ ಮರೆಯದ ಬಾರತ ರತ್ನ ಎನ್ನುತ್ತಾ ಗಡಿ ಕಾಯುವ ವೀರಯೋಧರ ಪ್ರತಿಭೆಗಳನ್ನು ಸ್ಮರಿಸಿ ಕಲಾ ನಮನ ಸಲ್ಲಿಸಿದರು. ಸೈನಿಕರ ಮಹತ್ವವನ್ನು ತಿಳಿಸಿದರು. ಕನ್ನಡ ನಾಡು ನುಡಿ, ಸಂಸ್ಕೃತಿಯ ವೈಭವವನ್ನು ವೇದಿಕೆಯ ಮೇಲೆ ತಂದವರು ಪ್ರಥಮ ಬಿ.ಸಿ.ಎ. ವಿದ್ಯಾರ್ಥಿಗಳು. ವೈವಿಧ್ಯಮಯ ಭಾರತದ ಸಂಸ್ಕೃತಿಯನ್ನು ಪ್ರದರ್ಶಿಸಿದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭಾರತದ ವಿವಿಧತೆಯಲ್ಲಿ ಏಕತೆಯ ಗುಣವನ್ನು ನೃತ್ಯರೂಪಕ ಹಾಗೂ ಸಂಗೀತದ ಮೂಲಕ ಪ್ರಸ್ತುತಪಡಿಸಿ ಪ್ರೇಕ್ಷಕರ ಕರತಾಡನಕ್ಕೆ ಭಾಜನರಾದರು. ಪರಶುರಾಮನ ಸೃಷ್ಟಿಯೆಂದೇ ಜನಮನಿತವಾದ ತುಳುನಾಡು ಹಲವು ವೈವಿಧ್ಯಮಯ ಕಲೆ, ಆಚರಣೆಗಳ ಆಗರ. ಕಂಬಳ, ದೈವನೇಮ, ತುಳು ಸುಗ್ಗಿ, ಮದುವೆ, ಆಟಿ ಕಳಂಜ, ಯಕ್ಷಗಾನ ಮೊದಲಾದ ಕಲಾ ಕ್ರೀಡೆಗಳ ಸುಗ್ಗಿಯನ್ನು ರಂಗಕ್ಕೆ ತಂದು ವೇದಿಕೆಯನ್ನು ರಂಗಾಗಿಸಿದವರು ದ್ವಿತೀಯ ಬಿಬಿಎ ವಿದ್ಯಾರ್ಥಿಗಳು.
ದ್ವಿತೀಯ ಬಿ.ಕಾಂ. ವಿದ್ಯಾರ್ಥಿಗಳು ಹುಟ್ಟಿನಿಂದ ಸಾಯುವ ವರೆಗೂ ಮನುಷ್ಯ ಹಾದು ಬರುವ ವಿವಿಧ ಹಂತಗಳನ್ನು, ನೋವು ನಲಿವಿನ ಜೀವನವನ್ನು, ಕತೆಯಾಗಿ ಕಟ್ಟಿಕೊಟ್ಟರೆ ದ್ವಿತೀಯ ಬಿಎ ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಮಾನವನ ಒಡನಾಟ ಮತ್ತು ಇತ್ತೀಚಿನ ದಿನಗಳಲ್ಲಿ ಮಾನವನ ಅತಿಯಾದ ಬುದ್ಧಿವಂತಿಕೆಯಿಂದ, ಪ್ರಕೃತಿಯು ಮುನಿಸಿಕೊಂಡು, ಪ್ರಾಣಿ ಪಕ್ಷಿಗಳು, ಜೀವ ಜಂತುಗಳು ಮತ್ತು ಮನುಷ್ಯನು ಎದುರಿಸುವ ಅನೇಕ ಸಮಸ್ಯೆಗಳನ್ನು ತಿಳಿಸುತ್ತಾ ಮತ್ತು ಹೀಗೆ ಪ್ರಕೃತಿಯು ನಾಶವಾದರೆ ಮನುಷ್ಯನು ಮುಂದೊಂದು ದಿನ ಅಂತ್ಯದೆಡೆಗೆ ಸಾಗುತ್ತಾನೆ ಎಂಬುದನ್ನು ನೃತ್ಯ ರೂಪಕದಲ್ಲಿ ಕಟ್ಟಿಕೊಟ್ಟರು.
ತೃತೀಯ ಬಿಬಿಎ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವು ಬದುಕನ್ನು ರೂಪಿಸಲು ಇರುವ ಅವಕಾಶ. ಅದನ್ನು ಹಾಳುಗೆಡುವ ಬದಲು ಗುರಿಯತ್ತ ಸಾಗುವುದು ಮುಖ್ಯ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಿದರೆ ತೃತೀಯ ಬಿಕಾಂ ವಿದ್ಯಾರ್ಥಿಗಳು ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ದೇವರು ಒಂದೇ ಆದರೆ ನಾಮ ಹಲವು ಎಂಬ ಮಾತಿನಂತೆ, ಇಲ್ಲಿ ವಿವಿಧ ಧರ್ಮ, ವಿವಿಧ ಆಚರಣೆ, ವಿವಿಧ ಜಾತಿ ಇದ್ದರೂ ನಾವೆಲ್ಲಾ ಭಾರತಾಂಬೆಯ ಮಕ್ಕಳು. ಆಧುನಿಕತೆಯ ಗಾಳಿ ಬೀಸಿದರೂ, ನಮ್ಮ ಆಚರಣೆ, ಸಂಸ್ಕೃತಿಯನ್ನು ಉಳಿಸೋಣ ಎಂಬ ಸಂದೇಶವನ್ನು ಸಾರಿದರು.
ಸ್ನಾತಕೋತ್ತರ ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕೇರಳದ ರಾಜ ರವಿವರ್ಮನ ಜೀವನ ಕಥೆಯನ್ನು ತಿಳಿಸುತ್ತಾ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಬ್ಬಿರುವ ಎಲ್ಲಾ ಕಲೆಯ ತಾಯಿ ಬೇರು ಜನಪದ ಕಲೆ. ಜನಪದ ಕಲೆಯನ್ನು ಉಳಿಸಿ ಬೆಳೆಸೋಣ ಎಂಬ ಸಂದೇಶವನ್ನು ಕಟ್ಟಿಕೊಟ್ಟರು.
ಪ್ರಥಮ ಬಿಕಾಂ ವಿದ್ಯಾರ್ಥಿಗಳು ಹಿಂದಿ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ವೇದಿಕೆಯಲ್ಲಿ ಧೂಳೆಬ್ಬಿಸಿದರೆ ತೃತೀಯ ಬಿಎ ವಿದ್ಯಾರ್ಥಿಗಳು ತುಳುನಾಡಿನ ಸಂಸ್ಕೃತಿಯನ್ನು ನೃತ್ಯರೂಪಕ ಮತ್ತು ಸಂಗೀತದ ಮೂಲಕ ಕಣ್ಣಿಗೆ ಕಟ್ಟಿಕೊಟ್ಟರು. ಕೊನೆಯದಾಗಿ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿಗಳು ಭಾರತೀಯ ಮತ್ತು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವುದರ ಮೂಲಕ ವಿವಿಧ ಪ್ರಕಾರದ ನೃತ್ಯ ರೂಪಕ ಮತ್ತು ಸಂಗೀತದ ಝಲಾಕ್‌ನೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆದರು.
ತೀರ್ಪುಗಾರರಾಗಿ ಭರತನಾಟ್ಯ ಕಲಾವಿದೆ ಮಂಜುಳ ಸುಬ್ರಮಣ್ಯ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕ ಹರಿಪ್ರಸಾದ್ ಮತ್ತು ವಿವೇಕಾನಂದ ಕಾಲೇಜಿನ ಪಾಲಿಟೆಕ್ನಿಕ್ ಎಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕಿ ಜಯಲಕ್ಷಿ್ಮ ಬಾಲಕೃಷ್ಣ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಪ್ರತಿಭಾ ದಿನಾಚರಣೆಯಲ್ಲಿ ಪ್ರಥಮ ಬಹುಮಾನವನ್ನು ಎಂಎಸ್ಸಿ, ದ್ವಿತೀಯ ಬಹುಮಾನವನ್ನು ಎಂಕಾಂ ಹಾಗೂ ತೃತೀಯ ಬಹುಮಾನವನ್ನು ದ್ವಿತೀಯ ಬಿಕಾಂ ವಿದ್ಯಾರ್ಥಿಗಳು ಪಡೆದುಕೊಂಡರು. ಅಲ್ಲದೇ ಕಾಲೇಜಿನಲ್ಲಿ ಆಯೋಜಿಸಿದ ಸ್ವಚ್ಫ ತರಗತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಟಿ ಜಯರಾಮ್ ಭಟ್ ಬಹುಮಾನ ವಿತರಿಸಿದರು.
ಲಲಿತಾ ಸಂಘದ ಸಂಯೋಜಕಿ ಮತ್ತು ಹಿಂದಿ ವಿಭಾಗದ ಉಪನ್ಯಾಸಕಿ ಡಾ. ದುರ್ಗಾರತ್ನ ಕಾರ್ಯಕ್ರಮವನ್ನು ನಿರೂಪಿಸಿದರು.