Friday, September 20, 2024
ಸುದ್ದಿ

ಲಲಿತ ಕಲೆಗಳಿಂದ ಬೌದ್ಧಿಕ ಬೆಳವಣಿಗೆ ಸಾಧ್ಯ: ವಿದ್ವಾನ್ ರಾಮಕೃಷ್ಣ ಭಟ್ – ಕಹಳೆ ನ್ಯೂಸ್

ಪುತ್ತೂರು: ಸ್ವಾಮಿ ವಿವೇಕಾನಂದರು ಹೇಳಿದಂತೆ ಸ್ವಾಧ್ಯಾಯ ಆತ್ಮೋನ್ನತಿಗೆ ಕಾರಣವಾದರೆ ಲಲಿತಕಲೆಗಳು ಬೌದ್ಧಿಕ ಬೆಳವಣಿಗೆಗಳಿಗೆ ಪೂರಕವಾಗುತ್ತವೆ. ಎಲ್ಲರಿಗೂ ಕಲೆ ಒಲಿಯುವುದು ಅಸಾಧ್ಯವಾದರೂ ಕಲೆಯನ್ನು ಅನುಭವಿಸುವ, ಪ್ರೋತ್ಸಾಹಿಸುವ ಸಾಧ್ಯತೆ ಪ್ರತಿಯೊಬ್ಬನಿಗೂ ಪ್ರಾಪ್ತವಾಗುತ್ತದೆ. ತನ್ಮೂಲಕ ಸಾಂಸ್ಕೃತಿಕ ಉನ್ನತಿಗೆ ಎಲ್ಲರೂ ಪಾತ್ರರಾಗಬಹುದು ಎಂದು ಸಂಗೀತ ಗುರು ಹಾಗೂ ವಿಶ್ರಾಂತ ಶಿಕ್ಷಕ ವಿದ್ವಾನ್ ಯು.ಎಸ್.ರಾಮಕೃಷ್ಣ ಭಟ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಲಾದ ಐವತ್ತನಾಲ್ಕನೇ ವರ್ಷದ ವಿವೇಕಾನಂದ ಜಯಂತಿ ಪ್ರಯುಕ್ತದ ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಪ್ರತಿಯೊಬ್ಬನೂ ಒಳ್ಳೆಯತನದ ಶಕ್ತಿಯನ್ನು ಅರಿಯಬೇಕು ಮತ್ತು ಆ ಕುರಿತಾಗಿ ಅಚಲ ವಿಶ್ವಾಸವನ್ನು ಹೊಂದಿರಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಸೂಯೆ ಅವಮಾನಗಳಿಲ್ಲದಿರುವ ವಾತಾವರಣ ಸೃಷ್ಟಿಗೆ ಶ್ರಮಿಸಬೇಕು ಹಾಗೂ ಒಳ್ಳೆಯವರಾಗುವವರಿಗೆ ಸಹಕಾರಿಗಳಾಗಬೇಕು ಎಂಬುದು ವಿವೇಕಾನಂದರ ಆದರ್ಶವಾಗಿತ್ತು. ಈ ಹಿನ್ನೆಲೆಯಲ್ಲಿ ಯುವಮನಸ್ಸುಗಳು ಯೋಚನೆ ಮಾಡಬೇಕು ಮತ್ತು ಕಾರ್ಯತತ್ಪರರಾಗಬೇಕು. ತನ್ಮೂಲಕ ವಿವೇಕಾನಂದರ ಆದರ್ಶಗಳನ್ನು ಜಾರಿಗೆ ತರಬೇಕು ಎಂದು ಕರೆ ನೀಡಿದರು.

ಜಾಹೀರಾತು

ಶುಭಾಶಯದ ಮಾತುಗಳನ್ನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ನಿರಂತರ ಪ್ರಯತ್ನ ಮಾತ್ರ ಯಶಸ್ಸಿನೆಡೆಗೆ ವ್ಯಕ್ತಿಯನ್ನು ಒಯ್ಯಬಲ್ಲುದು. ನಿನ್ನೆಯ ನೋವೇ ನಾಳಿನ ಸಾಧನೆಗೆ ಪೂರಕವಾಗುತ್ತದೆ ಎಂಬುದನ್ನು ಮರೆಯಬಾರದು. ಸಕಾರಾತ್ಮಕ ಚಿಂತನೆ ನಮ್ಮನ್ನು ಎತ್ತರಕ್ಕೆ ಏರಿಸಬಲ್ಲುದು. ಹಾಗಾಗಿ ಜೀವನದಲ್ಲಿ ಉತ್ಸಾಹವನ್ನು ಸದಾ ಕಾಯ್ದುಕೊಂಡು ಬರುವುದು ಅತ್ಯಂತ ಅಗತ್ಯ ವಿಚಾರ ಎಂದು ನುಡಿದರು.

ವಿವೇಕಾನಂದ ಕಾಲೇಜಿನಲ್ಲಿ ಮೂರುಸಾವಿರದಷ್ಟು ವಿದ್ಯಾರ್ಥಿಗಳಿದ್ದಾರೆ. ಅಪಾರ ಸಂಖ್ಯೆಯ ಪ್ರತಿಭಾನ್ವಿತರನ್ನು ಈ ಸಂಸ್ಥೆ ಹೊಂದಿದೆ. ಆದಾಗ್ಯೂ ಈ ಸ್ಫರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳ ತಂಡ ಭಾಗವಹಿಸುವುದಿಲ್ಲ. ತನ್ಮೂಲಕ ಸ್ಪರ್ಧೆ ಯಾವುದೇ ಅನುಮಾನಗಳಿಗೆ ಎಡೆಕೊಡದ ರೀತಿಯಲ್ಲಿ ಪಾರದರ್ಶಕವಾಗಿ ನಡೆಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ ಸ್ಪರ್ಧೆಗಳಿಂದ ಅನೇಕ ಸಂಗತಿಗಳನ್ನು ಕಲಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಲಲಿತ ಕಲೆಗಳಿಗೆ ಅಪಾರವಾದ ಶಕ್ತಿಯಿದೆ. ಇದನ್ನು ಅರಿಯುವ ಕಾರ್ಯವೂ ಸ್ಪರ್ಧೆಗಳಿಂದ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕಿ ಸುಕನ್ಯಾ ಪ್ರಾರ್ಥಿಸಿದರು. ವಿವೇಕಾನಂದ ಜಯಂತಿ ಸ್ಪರ್ಧೆಗಳ ಸಂಯೋಜಕ ಎಚ್.ಬಾಲಕೃಷ್ಣ ಸ್ವಾಗತಿಸಿ, ಪ್ರಸ್ತಾವನೆಗೈದರೆ ಮತ್ತೋರ್ವ ಸಂಚಾಲಕ ರಮೇಶ್ ಭಟ್ ವಂದಿಸಿದರು. ಈ ಸಂದರ್ಭದಲ್ಲಿ ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ವೀಣಾ ರಾಘವೇಂದ್ರ ಶ್ಲೋಕವೊಂದನ್ನು ಪ್ರಸ್ತುತಪಡಿಸಿದರು.