ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿಗೆ ರಾಜ್ಯಮಟ್ಟದ ಪ್ರಬಂಧದಲ್ಲಿ ದ್ವಿತೀಯ ಸ್ಥಾನ – ಕಹಳೆ ನ್ಯೂಸ್
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಅವರು ಬೆಂಗಳೂರಿನ ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
‘ಕನ್ನಡ ಭಾಷೆ : ನಿನ್ನೆ-ಇಂದು-ನಾಳೆ; ಸವಾಲುಗಳು ಮತ್ತು ಅವಕಾಶಗಳು’ಎಂಬ ವಿಷಯದಲ್ಲಿ ನಡೆದ ಈ ಸ್ಪರ್ಧೆಯನ್ನು ಎರಡು ಹಂತಗಳಲ್ಲಿ ಆಯೋಜನೆ ಮಾಡಲಾಗಿತ್ತು.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಅಸಂಖ್ಯ ಪ್ರಬಂಧಗಳಲ್ಲಿ ಮೊದಲ ಹಂತದಲ್ಲಿ ಹತ್ತು ಅತ್ಯುತ್ತಮ ಪ್ರಬಂಧಗಳನ್ನು ಆಯ್ಕೆ ಮಾಡಲಾಗಿತ್ತು.
ಎರಡನೆಯ ಹಂತದಲ್ಲಿ ಪ್ರಬಂಧಕಾರರು ತೀರ್ಪುಗಾರರ ಮುಂದೆ ಪಿಪಿಟಿ ಪ್ರದರ್ಶನದ ಮೂಲಕ ಪ್ರಬಂಧ ಮಂಡನೆ ನಡೆಸಿದ್ದರು.
ಆ ಸಂದರ್ಭದಲ್ಲಿ ಪ್ರಶ್ನೋತ್ತರವೂ ನಡೆದಿತ್ತು. ಅಂತಿಮವಾಗಿ ನೀಡಲಾದ ಬಹುಮಾನದಲ್ಲಿ ಎರಡನೆಯ ಬಹುಮಾನಕ್ಕೆ ಭಾಗ್ಯಲಕ್ಷ್ಮಿ ಆಯ್ಕೆಯಾದರು.
ವಿವೇಕಾನಂದ ಕಾಲೇಜಿಗೆ ಕಳೆದ ವರ್ಷವೂ ಈ ಸ್ಪರ್ಧೆಯಲ್ಲಿ ಬಹುಮಾನ ದೊರಕಿತ್ತು. ಭಾಗ್ಯಲಕ್ಷ್ಮಿ ಅವರು ಪುತ್ತೂರಿನ ಬನ್ನೂರು ನಿವಾಸಿ ದೇವರಾಜ ಶೆಟ್ಟಿ ಹಾಗೂ ಹರಿಣಾಕ್ಷಿ ಶೆಟ್ಟಿ ದಂಪತಿ ಪುತ್ರಿ.