ಪುತ್ತೂರು: ಶಿಸ್ತುಭರಿತ ವಿದ್ಯಾಥಿಗಳೇ ಶಿಕ್ಷಣ ಸಂಸ್ಥೆಯ ಪ್ರಧಾನ ಆಸ್ತಿ. ಕರ್ತವ್ಯ ನಿಷ್ಟೆ, ಬದ್ಧತೆ ಪರಿಶ್ರಮ ಮತ್ತು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿದ್ದಾಗ ಶಿಕ್ಷಣ ಸಂಸ್ಥೆಯ ಕೀರ್ತಿ ಉತ್ತುಂಗಕ್ಕೇರಲು ಸುಲಭ ಸಾಧ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.
ಕಾಲೇಜಿನಲ್ಲಿ ಇಂದಿನಿಂದ ಜ. 24 ರ ತನಕ ಹಮ್ಮಿಕೊಳ್ಳಲಾದ ವಜ್ರಮಹೋತ್ಸವ ಆಚರಣೆಯ ಸಮಾರೋಪ ಸಮಾರಂಭದ ಕುರಿತು ಪೂರ್ವಭಾವಿಯಾಗಿ ಕಾಲೇಜು ಪ್ರಾಂಗಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಮುಂದಿನ ಮೂರು ದಿನಗಳಲ್ಲಿ ಜರಗಲಿರುವ ಐತಿಹಾಸಿಕ ಸಂಭ್ರಮಾಚರಣೆಗಳಿಗೆ ಕಾಲೇಜು ವಠಾರವು ಎಲ್ಲಾ ರೀತಿಯಲ್ಲಿ ಸಜ್ಜುಗೊಂಡಿದೆ. ಜನವರಿ 22 ರಂದು ಅಪರಾಹ್ನ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ, ಸಾಯಂಕಾಲ ರಕ್ಷಕ ಶಿಕ್ಷಕ ಸಂಘ ಹಾಗೂ ಹಿರಿಯ ವಿದ್ಯಾರ್ಥಿ ಸಂಘಗಳ ಜಂಟಿ ಆಶ್ರಯದಲ್ಲಿ ವಾಷಿಕೋತ್ಸವ, ಜನವರಿ 23 ರಂದು ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಜನವರಿ 24 ರಂದು ವಜ್ರಮಹೋತ್ಸವ ಆಚರಣೆಯ ಸಮಾರೋಪ ಸಮಾರಂಭ ಜರಗಲಿರುವುದು.
ಆರು ದಶಕಗಳಲ್ಲಿ ಮಾಡಿದ ಮೌಲ್ಯಾಧರಿತ ಸಾಧನೆಯ ಮೂಲಕ ಈ ಶಿಕ್ಷಣ ಸಂಸ್ಥೆಯ ಹೆಸರು ಜನಮಾನಸದಲ್ಲಿ ಅಚ್ಛಳಿಯದೆ ಉಳಿಯುವಂತಾಗಿದೆ. ವಿದ್ಯಾರ್ಥಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಸಂಸ್ಥೆಯ ಕೀರ್ತಿ ಪತಾಕೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಕಳೆದ ಆರು ದಶಕಗಳ ಅವಧಿಯಲ್ಲಿ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ರೀತಿಯಲ್ಲಿ ಗುರುತಿಸಲ್ಪಡುತ್ತಿದ್ದಾರೆ.
ಉನ್ನತ ಮಟ್ಟದ ಸಾಧನೆ ಮಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಗೌರವದ ಭಾವನೆಯಿಂದ ಕಾಣುವುದರೊಂದಿಗೆ ಅವರೆಲ್ಲರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬ ಪ್ರಸಕ್ತ ವಿದ್ಯಾರ್ಥಿಯೂ ದೃಢ ಸಂಕಲ್ಪವನ್ನು ಹೊಂದಿರಬೇಕು ಎಂದರು.
ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದನ್ ಕುಮಾರ್ ಜಿ, ಕಾರ್ಯದರ್ಶಿ ಮಹಮ್ಮದ್ ಅಫೀಸ್ ಮತ್ತು ಜೊತೆ ಕಾರ್ಯದರ್ಶಿ ವಿಯೋಲಿನ್ ಲುಸಿಟ್ಟಾ ಡಿ’ಸೋಜ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಭಾರತಿ ಎಸ್ ರೈ ಸ್ವಾಗತಿಸಿದರು. ಕ್ಷೇಮಪಾಲನಾಧಿಕಾರಿ ಡಾ. ಕೆ. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.