ಬೆಜ್ಜ ಶ್ರೀ ಧೂಮವತೀ ಬಂಟ ದೈವಗಳ ಕ್ಷೇತ್ರದ ಭಂಡಾರ ಮನೆಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಾರೋಪ ಸಮಾರಂಭ – ಕಹಳೆ ನ್ಯೂಸ್
ಮಂಜೇಶ್ವರ: ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಬೆಳಕು ನೀಡುವ ಸಂಸ್ಕೃತಿ ಇಂತಹ ಸಂಸ್ಕೃತಿಯನ್ನು ಮರೆತಲ್ಲಿ ಇಡೀ ವಿಶ್ವವೇ ಸರ್ವನಾಶಗೊಳ್ಳಲಿದೆ. ಆದುದರಿಂದ ನಮ್ಮ ಸಂಸ್ಕೃತಿಯನ್ನು ಪೋಷಿಸಿ ಸಂರಕ್ಷಿಸಬೇಕಾದುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆಯೆಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೋಕ್ತೇಸರ ವೇದಮೂರ್ತಿ ಶ್ರೀ ಅನಂತ ಪಧ್ಮನಾಭ ಅಸ್ರಣ್ಣ ನುಡಿದರು.
ಅವರು ಬೆಜ್ಜ ಶ್ರೀ ಧೂಮವತೀ ಬಂಟ ದೈವಗಳ ಕ್ಷೇತ್ರದ ಭಂಡಾರ ಮನೆಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಸಮಾರೋಪ ಸಮಾರಂಭದ ಧಾರ್ಮಿಕ ಸಭೆಯಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ ಅಶೀರ್ವಚನ ನೀಡುತ್ತಾ ಮಾತನಾಡಿದರು.
ಹಿಂದೂಗಳ ಎಲ್ಲಾ ಕೇಂದ್ರಗಳು ಸಂಸ್ಕಾರ ಕೇಂದ್ರವಾಗಿದೆ. ನಾವು ಅನ್ಯಾಯ, ಅಧರ್ಮದಲ್ಲಿ ಪ್ರಾರಂಭದಲ್ಲಿ ಗೆಲುವನ್ನು ಸಾಧಿಸಿದರೂ ಕೊನೆಯಲ್ಲಿ ಧರ್ಮಕ್ಕೆ ಮಾತ್ರ ಗೆಲುವು ಖಚಿತ ಎಂಬುವುದನ್ನು ನಮ್ಮ ಪುರಾಣ ಇತಿಹಾಸಗಳು ಸಾರಿ ಹೇಳುತ್ತಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಮ್ .ಸಂಜೀವ ಶೆಟ್ಟಿ ಬೆಜ್ಜದ ಗುತ್ತು ವಹಿಸಿದರು.
ವೇದಿಕೆಯಲ್ಲಿ ಮಂಚಿ ಧರ್ಮ ಜಾಗರಣಾ ಪ್ರತಿಷ್ಠಾನದ ಅಧ್ಯಕ್ಷ ಕೈಯ್ಯಾರ್ ನಾರಾಯಣ ಭಟ್, ಧಾರ್ಮಿಕ ಮುಂದಾಳು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಶ್ರೀಮತಿ ಚೇತನಾ .ಎಮ್ ಉಪಸ್ಥಿತರಿದ್ದು ಶುಭಶಂಸನೆಗೈದರು.
ಕುಮಾರಿ ಲತಾ ಪ್ರಾರ್ಥನೆ ಹಾಡಿದರು. ಜಯರಾಮ ಶೆಟ್ಟಿ ಬೆಜ್ಜದ ಗುತ್ತು ಸ್ವಾಗತಿಸಿದರು. ಹೇಮ ಚಂದ್ರ ಕೈರಂಗಳ ನಿರೂಪಿಸಿದರು. ಕೃಷ್ಣ ಕೊಳಂಜ ವಂದಿಸಿದರು. ಬಳಿಕ ಸ್ಥಳೀಯ ಮಕ್ಕಳಿಂದ ನೃತ್ಯ ಪ್ರದರ್ಶನ, ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ ‘ರ್ಅಗಂಟ್’ ನಾಟಕ ನಡೆಯಿತು.
ನಿನ್ನೆ ಬೆಳಿಗ್ಗೆ ಗಣಪತಿ ಹೋಮ, 8.32 ರ ಕುಂಭ ಲಗ್ನದ ಶುಭ ಮೂಹೂರ್ತದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ದುರ್ಗಾ ಹೋಮ, ದೈವಗಳ ತಂಬಿಲ, ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ 8.00 ಕ್ಕೆ ಚೌಕಿ ಪೂಜೆ ಅನ್ನಸಂತರ್ಪಣೆ, ಬಪ್ಪನಾಡು ಮೇಳದವರಿಂದ ‘ಬಾಲೆ ಭಗವಂತನ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.