ಪುತ್ತೂರು: ತುಳಸೀದಾಸರ ಪಾವನ ಗ್ರಂಥವೆಂದೇ ಕರೆಯಲ್ಪಡುವ ಹನುಮಾನ ಚಾಲೀಸಾವನ್ನು ಉತ್ತರ ಭಾರತದ ಮನೆ ಮನೆಗಳಲ್ಲಿ ದಿನನಿತ್ಯ ಪಠಿಸುತ್ತಾರೆ ಎಂದು ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗ ಮತ್ತು ಹಿಂದಿ ಸಂಘ ಜಂಟಿಯಾಗಿ ಆಯೋಜಿಸಿದ ಹನುಮಾನ ಚಾಲೀಸಾ ಪಠನ ಸಪ್ತಾಹವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಹನುಮಾನ ಚಾಲೀಸಾ ಪಠನದಿಂದ ನಮ್ಮ ಕಷ್ಟಗಳು ದೂರಾಗುವುದು ಹಾಗೂ ನೆಮ್ಮದಿ ದೊರೆಯುವುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಹನುಮಾನ ಚಾಲಿಸಾ ಪಠನವನ್ನು ಮಾಡಬೇಕು ಎಂದರಲ್ಲದೆ ಚಿಕ್ಕಂದಿನಿಂದ ಹಾಡುಗಳನ್ನು ಕೇಳುವುದು ಹಾಗೂ ಬರೆಯುವುದು ತನ್ನ ಹವ್ಯಾಸ. ಕನ್ನಡ ಭಾಷೆಯ ಮೇಲಿನ ಒಲವಿನಿಂದಾಗಿ, ತುಳಸೀದಾಸರ ಅವಧೀ ಭಾಷೆಯ ಹನುಮಾನ ಚಾಲೀಸಾವನ್ನು ಕನ್ನಡಕ್ಕೆ ತಾನುಅನುವಾದ ಮಾಡಿದೆಯೆಂದು ನುಡಿದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಬಾಕರ್ ಪ್ರತಿಯೊಬ್ಬರೂ ಹನುಮಾನ ಚಾಲೀಸಾ ಪಠನವನ್ನು ಗೈಯಬೇಕು. ಒಳ್ಳೆಯ ಗುಣಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ರಾಮಕೃಷ್ಣ ಶಾಸ್ತ್ರಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಸಂಯೋಜಕಿ ಡಾ.ದುರ್ಗಾರತ್ನ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾನಸ ಪ್ರಾರ್ಥನೆ ಮಾಡಿದರು. ಸಂಘದ ಅಧ್ಯಕ್ಷೆ ಸಾತ್ವಿಕಾ ಸ್ವಾಗತಿಸಿ, ಕಾರ್ಯದರ್ಶಿ ವಿದ್ಯಾ ವಂದಿಸಿದರು. ವಿದ್ಯಾರ್ಥಿನಿ ಆಶಾದೇವಿ ಕಾರ್ಯಕ್ರಮ ನಿರೂಪಿಸಿದರು.